ನಗರದಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ:ಸ್ವರೂಪ್ ಪರವಾಗಿ ರೇವಣ್ಣ ದಂಪತಿ ರೋಡ್ ಶೋ

ನಗರದಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ:ಸ್ವರೂಪ್ ಪರವಾಗಿ ರೇವಣ್ಣ ದಂಪತಿ ರೋಡ್ ಶೋ
Published on

ಹಾಸನ :  ದಿನದಿಂದ ದಿನಕ್ಕೆ ಹಾಸನ ವಿಧಾನಸಭಾ ಕ್ಷೇತ್ರ ರೋಚಕತೆ ಪಡೆದುಕೊಳ್ಳುತ್ತಿದ್ದು, ಮೂರೂ ಪಕ್ಷದವರು ಕೂಡ ನಾ ಮುಂದು ತಾ ಮುಂದು ಎಂದು ಮತಬೇಟೆಗೆ ಮುಗಿ ಬಿದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರವಾಗಿ ರೇವಣ್ಣ ಮತ್ತು ಭವಾನಿ ಅವರು ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮತಯಾಚಿಸಿದರು.

ಇದಕ್ಕೂ ಮೊದಲು ನಗರದ ನೀರುವಾಗಿಲು ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದಲೇ ಮೆರವಣಿಗೆ ಪ್ರಾರಂಭವಾಗಿ ಎನ್.ಆರ್. ವೃತ್ತ, ಹೇಮಾವತಿ ಪ್ರತಿಮೆ, ಸಹ್ಯಾದ್ರಿ ವೃತ್ತ, ಸ್ಲೇಟರ್ಸ್‌ ಹಾಲ್ ಸರ್ಕಲ್ ಬಳಸಿ ದೊಡ್ಡಿರಸ್ತೆ, ಬಳಿಕ ಸಂಪಿಗೆ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು, ರೇವಣ್ಣನವರು ಸಚಿವರಾಗಿದ್ದ ಸಂದರ್ಭದಲ್ಲಿ ಹಾಸನ ನಗರಕ್ಕೆ ಮತ್ತು ಜಿಲ್ಲೆಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ನಾವು ಹಾರಿ ಹೋಗುವ ತಗಡು ಶೀಟುಗಳನ್ನು ಹಾಕಿಸಿಲ್ಲ. ಬದಲಿಗೆ ಶಾಶ್ವತವಾಗಿ ಉಳಿಯುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕರಿಗೆ ಟಾಂಗ್ ನೀಡಿದರು.

ಬಡ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಕ್ಕಳ ಮತ್ತು ಮಹಿಳೆಯರ ಆಸ್ಪತ್ರೆ, ಹಿಮ್ಸ್ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಅಲ್ಲದೆ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಪಿಯುಸಿ ಮತ್ತು ಪದವಿ ಕಾಲೇಜು, ಪಶುವೈದ್ಯಕೀಯ ಕಾಲೇಜುಗಳನ್ನು ತಂದು ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾಗುವ ಕೆಲಸ ಮಾಡಿದ್ದಾರೆ ಎಂದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ನಮ್ಮ ಅಧಿಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಹಾಗೂ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವಂತಹ ಕೆಲಸ ಮಾಡಲಾಗಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನಗಳನ್ನು ನೀಡಿದ್ದಾರೆ. ಮುಂದೆಯೂ ಕೂಡ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕುಮಾರಣ್ಣ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಮಾತನಾಡಿ, ನಮ್ಮ ತಂದೆ ನಾಲ್ಕು ಬಾರಿ ಶಾಸಕರಾಗಿ ರೇವಣ್ಣನವರ ಸಹಕಾರದಿಂದ ಹಲವು ಕೆಲಸಗಳನ್ನು ಮಾಡಿದ್ದಾರೆ. ಈಗ ಅವರ ಬದಲಾಗಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಿತ್ತೇನೆ ಎಂದರು.

ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಪಕ್ಷಾತೀತ ಮತ್ತು ಜಾತ್ಯತೀತವಾಗಿ ನನ್ನನ್ನು ಬೆಂಬಲಿಸಲು ಎಲ್ಲರೂ ಮುಂದಾಗಿದ್ದಾರೆ. ಶಾಸಕರ ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಧೋರಣೆ ಕೊನೆಗಾಣಿಸಲು ಎಲ್ಲರೂ ಸಹಕರಿಸುತ್ತಿದ್ದಾರೆ. ಅವರೆಲ್ಲರಿಗೂ ನಾನು ಅಭಾರಿಯಾಗಿರುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆ.ಎಂ.ರಾಜೇಗೌಡ, ಎಸ್.ದ್ಯಾವೇಗೌಡ, ಸ್ವಾಮಿಗೌಡ ಸೇರಿದಂತೆ ನಗರಸಭೆ ಸದಸ್ಯರು, ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net