ನಗರದಲ್ಲಿ ಗುಣಶೀಲ ಫರ್ಟಿಲಿಟಿ ಸೆಂಟರ್ ಆರಂಭ

31 yerriswamy 03
Published on

ಬಳ್ಳಾರಿ : ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ಪ್ರಸಿದ್ದಿ ಪಡೆದಿರುವ ಬೆಂಗಳೂರಿನ ಗುಣಶೀಲ ಸರ್ಜಿಕಲ್ ಆಂಡ್ ಮ್ಯಾಟರ್ನಿಟಿ ಆಸ್ಪತ್ರೆಯ ಕೇಂದ್ರವು ನಗರದಲ್ಲಿ ಆರಂಭಿಸಲಾಗಿದೆ ಎಂದು ಸಂತಾನೋತ್ಪತ್ತಿ ತಜ್ಞೆ ಡಾ.ದೇವಿಕಾ ಗುಣಶೀಲ ಹೇಳಿದರು.
ಇಲ್ಲಿನ ಪಾರ್ವತಿ ನಗರದ ಮುಖ್ಯ ರಸ್ತೆಯ ನೂತನ ಕೇಂದ್ರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ನಮಗಿರುವ ಅನುಭವವನ್ನು ಬಳ್ಳಾರಿಗೆ ಪರಿಚಯಿಸಲು ನಮಗೆ ಸಂತಸವಾಗಿದೆ. ನಗರದಲ್ಲಿ ಕೇಂದ್ರ ಆರಂಭಿಸಿರುವುದರಿಂದ ಸಮೀಪದ ಸ್ಥಳದಲ್ಲಿ ಚಿಕಿತ್ಸೆ ಲಭಿಸಲಿದೆ. ಇದರಿಂದ ಸಂತಾನಹೀನ ದಂಪತಿಗಳಿಗೆ ದೂರದ ಮಹಾನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ತಪ್ಪಲಿದೆ. ಇತ್ತೀಚಿನ ವರ್ಷಗಳಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಎದುರಾಗುವ ಫ್ಯಾಲೋಪಿನ್ ಟ್ಯೂಬ್ ಬ್ಲಾಕ್, ಪದೇಪದೇ ಗರ್ಭಪಾತ ಹಾಗೂ ಸಂತಾನಹೀನತೆ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಈ ಸಮಸ್ಯೆಗೆ ಚಿಕಿತ್ಸೆ ಲಭಿಸುವಂತೆ ಆಗಬೇಕು ಎಂಬುದು ಗುರಿಯಾಗಿದೆ ಎಂದು ವಿವರಿಸಿದರು. ನಗರದಲ್ಲಿ ಆರಂಭವಾಗಲಿರುವ ಈ ಕೇಂದ್ರದಲ್ಲಿ ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ, ಮಕ್ಕಳಿಲ್ಲದ ದಂಪತಿಗಳಿಗೆ ಅಗತ್ಯವಿರುವ ಬೆಂಬಲ ಹಾಗೂ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.
ಆಸ್ಪತ್ರೆಯ ನಿರ್ದೇಶಕ ಡಾ.ರಾಜಶೇಖರ ನಾಯಕ್ ಮಾತನಾಡಿ, ಗುಣಶೀಲ ಫರ್ಟಿಲಿಟಿ ಕೇಂದ್ರವು ಐವಿಎಫ್ ಚಿಕಿತ್ಸೆಯಲ್ಲಿ ಶೇ.70 ರಷ್ಟು ಯಶಸ್ಸಿನ ದರ ಹೊಂದಿದೆ. ಸಂತಾನೋತ್ಪತ್ತಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಕರ್ಯ ಹೊಂದಿದೆ. ಕೇಂದ್ರದ ಯಶಸ್ಸು, ಬದ್ಧತೆ ಹಾಗೂ ನೈಪುಣ್ಯದ ಬಗ್ಗೆ ಮಾಹಿತಿ ನೀಡಿದರು. ಐವಿಎಫ್ ಚಿಕಿತ್ಸೆಯಲ್ಲಿ ಪರಿಣಿತಿ ಸಾಧಿಸಿರುವ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಗುಣಶೀಲ ಫರ್ಟಿಲಿಟಿ ಕೇಂದ್ರದ ಪ್ರಾರಂಭೋತ್ಸವ ಅಂಗವಾಗಿ ನೂತನ ಘಟಕದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net