ನಗರದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಭವ್ಯ ಸ್ವಾಗತ

ನಗರದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಭವ್ಯ ಸ್ವಾಗತ
Published on

ಹಾಸನ: ನಗರದ ಡೇರಿ ವೃತ್ತಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಶಾಸಕ ಎಚ್.ಪಿ. ಸ್ವರೂಪ್ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಗಣ್ಯರು ಸೇರಿದಂತೆ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು.
ಮೆರವಣಿಗೆಯಲ್ಲಿ ದಾರಿ ಉದ್ದಗಲಕ್ಕೂ ಕನ್ನಡದ ಬಾವುಟ ಹಿಡಿದಿದ್ದ ವಿದ್ಯಾರ್ಥಿಗಳು ಕನ್ನಡ ಜ್ಯೋತಿ ರಥ ಹತ್ತಿರ ಬರುತ್ತಿದ್ದಂತೆ ಕನ್ನಡ ಮಾತೆಗೆ ಜೈಕಾರ ಹಾಕುತ್ತಿದ್ದರು. ಇನ್ನು ರೈಲ್ವೆ ನಿಲ್ದಾಣದ ಹತ್ತಿರ ಕಲಾವಿದ ಬಿ.ಡಿ. ಶಂಕರೇಗೌಡ ಅವರು ಕನ್ನಡಾಭಿಮಾನ ಕುರಿತಾದ ಹಾಡನ್ನು ಹಾಡಿ ಗಮನ ಸೆಳೆದರು. ಇದಾದ ಬಳಿಕ ಬಿ.ಎಂ. ರಸ್ತೆ ಮೂಲಕ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದಾಗ ಜಿಲ್ಲಾಧಿಕಾರಿಗಳು ಸ್ವಾಗತ ಕೋರಿದರು. ನಂತರ ಕನ್ನಡ ಹಾಡನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಂಗೀತಗಾರರು ಸೇರಿ ನಾಲ್ಕೈದು ಕನ್ನಡ ಹಾಡನ್ನು ಹಾಡಿದರು. ಇದಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ಅನೇಕರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎನ್ನುವ ಡಾ. ರಾಜಕುಮಾರ್ ಅವರ ಕಂಠಸಿರಿಯ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು.
ಶಾಸಕ ಎಚ್.ಪಿ. ಸ್ವರೂಪ್ ಇದೆ ವೇಳೆ ಮಾತನಾಡಿ, ಕರ್ನಾಟಕ ಸಂಭ್ರಮ 50ರ ಪ್ರಯುಕ್ತ ಕನ್ನಡ ಅಭಿಯಾನದ ಈ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾವು ಕಳೆದ ಒಂದು ವರ್ಷದಿಂದ ಕನ್ನಡ ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಿತ್ತು. ಇದೀಗ ರಥಯಾತ್ರೆ ನಮ್ಮ ಹಾಸನ ಜಿಲ್ಲೆಗೆ ವಿಶೇಷವಾಗಿ ಬಂದಿದೆ. ಹೆಸರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ ಎನ್ನುವ ಘೋಷಣೆಯನ್ನು ಎಲ್ಲ ಕನ್ನಡಪರ ಸಂಘಟನೆಯ ಮುಖಂಡರು ಹಾಗೂ ಮಹಿಳೆಯರು ಎಲ್ಲರೂ ಸೇರಿ ಈ ರಥ ಯಾತ್ರೆಗೆ ಸ್ವಾಗತ ಕೋರಿ ಅದ್ದೂರಿಯಾಗಿ ಮೆರವಣಿಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸಲು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ರಾಜ್ಯದ ಹೆಸರನ್ನು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿ 50 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಸಂಭ್ರಮ 50 ಆಚರಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಕರ್ನಾಟಕ ಸಂಭ್ರಮ 50 ಅಡಿಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಅನುವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 ನವೆಂಬರ್ 2ರಂದು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಚಾಲನೆ ನೀಡಿದ್ದರು. ಎಂದು ಮಾಹಿತಿ ನೀಡಿದರು.
ಕನ್ನಡಪರ ಒಕ್ಕೂಟದ ಅಧ್ಯಕ್ಷರಾದ ಬಾಳ್ಳುಗೋಪಾಲ್ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮವು ಎಲ್ಲರಲ್ಲೂ ಸಂತೋಷ ಉಂಟು ಮಾಡಿದೆ. ಕನ್ನಡದ ರಥ ಯಾತ್ರೆ ಸ್ವಾಗತಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿರುವುದು ಕನ್ನಡ ಭಾಷೆಗೆ ಮೇಲೆ ಇರುವ ಗೌರವದ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ, ಎಡಿಸಿ ಕೆ.ಟಿ. ಶಾಂತಲಾ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಇನ್ನರ್ ವೀಲ್ ಕ್ಲಬ್ ಹಾಸನ್ ಗೋಲ್ಡ್ ಅಧ್ಯಷೆ ಡಾ. ತನಿಜಾ, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ರತೀ, ಜನನಿ ಫೌಂಡೇಷನ್ ಅಧ್ಯಕ್ಷೆ ಭಾನುಮತಿ ಇತರರು ಉಪಸ್ಥಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net