

ಚಾಮರಾಜನಗರ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ಎಂದ ಧ್ಯೇಯ ವಾಕ್ಯದೊಂದಿಗೆ ಶನಿವಾರ ಆಯೋಜಿಸಿದ್ದ ಐಕ್ಯತೆಯ ತಿರಂಗಾ ಯಾತ್ರೆ ಬಹಳ ಅರ್ಥಪೂರ್ಣವಾಗಿ ನಡೆಯಿತು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಪ್ರಾರಂಭವಾದ ತಿರಂಗಾ ಯಾತ್ರೆಗೆ ಮರಿಯಾಲ ಮಠದ ಶ್ರೀಇಮ್ಮಡಿ ಮುರುಘಾ ರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀಸಿದ್ಧಮಲ್ಲೇಶ್ವರ ವಿರಕ್ತಮಠದ ಶ್ರೀಚನ್ನಬಸವಸ್ವಾಮೀಜಿ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ರಥದಬೀದಿ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಡಳಿತ ಭವನದ ಮುಂಭಾಗ ಮುಕ್ತಾಯವಾಯಿತು.
ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು, ಮಹಿಳೆಯರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮೆರವಣಿಗೆ ಉದ್ದಕ್ಕೂ ತ್ರಿವರ್ಣ ಧ್ವಜಗಳನ್ನು ಹಿಡಿದು ದೇಶದ ಪ್ರಧಾನಮಂತ್ರಿ, ಸೈನಿಕರು ಹಾಗೂ ಜಮ್ಮು ಮತ್ತು ಕಾಶ್ಮೀರದ ಪರವಾಗಿ ವಿವಿಧ ೋಷಣೆಗಳನ್ನು ಕೂಗುವ ಮೂಲಕ ಐಕ್ಯತೆಯನ್ನು ಸಾರಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ, ಮೂಡ್ನಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಡಾ.ಬಾಬು, ರಾಷ್ಟ್ರೀಯ ಓಬಿಸಿ ಕಾರ್ಯಕಾರಣಿ ಸದಸ್ಯ ನೂರೊಂದು ಶೆಟ್ಟಿ, ಚುಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಬಾಲಸುಬ್ರಮ್ಮಣ್ಯಂ, ಅರಕಲವಾಡಿ ನಾಗೇಂದ್ರ, ಸಿ.ಎಂ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲರಾಜ್, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಣಯ್, ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ,ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಆಶಾ ನಟರಾಜ್, ಶಿವರಾಜ್, ನಟರಾಜ್, ಕಾಡಹಳ್ಳಿ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.
ರಾಷ್ಟ್ರಪ್ರೇಮದಿಂದ ಭಾಗಿಗಳಾಗಿ:
ದೇಶದಾದ್ಯಂತ ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ನಡೆಯುತ್ತಿರುವ ತಿರಂಗಾ ಯಾತ್ರೆಯಲ್ಲಿ ರಾಷ್ಟ್ರಪ್ರೇಮದಿಂದ ಪ್ರತಿಯೊಬ್ಬರು ಭಾಗವಹಿಸಿ ಎಂದು ಮರಿಯಾಲ ಮಠದ ಶ್ರೀಇಮ್ಮಡಿ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು. ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ನಡೆದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಯುದ್ಧದ ಸನ್ನಿವೇಶಗಳಲ್ಲಿ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಈ ಮೂಲಕ ನಮ್ಮ ಸೈನಿಕರು ಉಗ್ರರನ್ನು ಸದೆ ಬಡಿಯುವ ಮೂಲಕ ದೇಶಕ್ಕೆ ಭದ್ರತೆಯನ್ನು ಒದಗಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಹೆಮ್ಮೆಯ ಯೋಧರಿಗೆ ಅಭಿನಂದನೆ ಸಲ್ಲಿಸಲು ರಾಷ್ಟ್ರಾದ್ಯಂತ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಷ್ಟ್ರವನ್ನು ರಕ್ಷಣೆ ಮಾಡುತ್ತಿರುವ ಸೈನಿಕರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಅಂತಹ ಸೈನಿಕರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ನಮ್ಮನ್ನು ರಕ್ಷಣೆ ಮಾಡಿದ್ದಾರೆ. ನಾವೆಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ರಾಷ್ಟ್ರಪ್ರೇಮದಿಂದ ಭಾಗಿಯಾಗಬೇಕಿದೆ ಎಂದರು.
ಕಳೆದ ವಾರದ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಿದ್ದಾರೆ. ದೇಶಪ್ರೇಮ ಪ್ರತಿಯೊಬ್ಬರಲ್ಲೂ ಇರಬೇಕು, ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು.
-ಶ್ರೀಚನ್ನಬಸವ ಸ್ವಾಮೀಜಿ, ಪೀಠಾಧ್ಯಕ್ಷ, ಶ್ರೀಸಿದ್ದಮಲ್ಲೇಶ್ವರ ವಿರಕ್ತಮಠ, ಚಾಮರಾಜನಗರ
ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಮ್ಮದೇಶದ ಮಹಿಳೆಯರ ಸಿಂಧೂರವನ್ನು ಅಳಿಸಿಹಾಕಿದ ಉಗ್ರರಿಗೆ ತಕ್ಕ ಪಾಠವನ್ನು ಕಲಿಸುವ ನಿಟ್ಟಿನಲ್ಲಿ ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ. ನಮ್ಮ ದೇಶದ ಯೋಧರಿಗೆ ನಾವೆಲ್ಲರೂ ಎಲ್ಲಾ ವಿಧವಾದ ಬೇಧವನ್ನು ಮರೆತು ಅಭಿನಂದನೆ ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆಯನ್ನು ಮಟ್ಟಹಾಕಬೇಕಿದೆ.
-ಆನಂದ್ ಭಗೀರಥ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಯುವಮೋರ್ಚಾ, ಚಾಮರಾಜನಗರ