ನಗರದಲ್ಲಿ ಈದ್ ಮಿಲಾದ್ ಹಿನ್ನಲೆಯಲ್ಲಿ ಬೃಹತ್ ಮೆರವಣಿಗೆ

ನಗರದಲ್ಲಿ ಈದ್ ಮಿಲಾದ್ ಹಿನ್ನಲೆಯಲ್ಲಿ ಬೃಹತ್ ಮೆರವಣಿಗೆ
Published on

ಹಾಸನ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರ ಹಾಗೂ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸಿದರು. ಪ್ರವಾದಿ ಅವರ ಜೀವನ, ಬೋಧನೆಗಳು, ತ್ಯಾಗಗಳನ್ನು ಗೌರವಿಸಲು ಆಚರಿಸುವ ಹಬ್ಬದಂದು ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಅಮೀರ್‌ಮೊಹಲ್ಲಾದಿಂದ ಆರಂಭವಾದ ಮುಸ್ಲಿಂ ಬಾಂಧವರ ಬೃಹತ್ ಮೆರವಣಿಗೆ ನಗರದ ಹಾಸನಾಂಬ ಟೆಂಪಲ್, ಶಂಕರನಾಗ್ ಸರ್ಕಲ್, ಚಾಲುಕ್ಯ ಬಾರ್ ಕ್ರಾಸ್, ಅಜಾದ್ ರೋಡ್ ಕ್ರಾಸ್, ಎನ್.ಆರ್.ಸರ್ಕಲ್, ಹೇಮಾವತಿ ಪ್ರತಿಮೆ, ಅಗ್ರಹಾರ ಬೀದಿ ಕ್ರಾಸ್, ಪಾಂಚಜನ್ಯ, ಇಂದು ಮೆಡಿಕಲ್ ಕ್ರಾಸ್, ಬಸವೇಶ್ವರ ಕಲ್ಯಾಣ ಮಂಟಪ, ಈದ್ಗಾ ಸರ್ಕಲ್, ಚಿಕ್ಕನಾಳು ಸರ್ಕಲ್,ನೂರಾನಿ ಮಸೀದಿ, ಇಲಾಹಿ ನಗರ, ಶಾಹಿ ಮಸೀದಿ, ಗಂಗಾಪರಮೇಶ್ವರಿ ದೇವಸ್ಥಾನ ಮೂಲಕ ಸಾಗಿ ಆರಂಭವಾದ ಸ್ಥಳದಲ್ಲೇ ಅಂತ್ಯವಾಯಿತು.
ಮೆರವಣಿಗೆಯಲ್ಲಿ ಸುಮಾರು 15ಸಾವಿರ ಮುಸ್ಲಿಂ ಸಮುದಾಯದ ಜನರು ಭಾಗವಹಿಸಿದ್ದು, ದಾರಿ ಉದ್ದಲಕ್ಕೂ ಅಲ್ಲಾ ಅಕ್ಬರ್ ಎನ್ನುವ ಘೋಷಣೆ ಕೇಳಿ ಬಂದಿತು. ಯುವಕರು ತಮ್ಮ ಕೈಯಲ್ಲಿ ಬಾವುಟ ಹಿಡಿದು ನೃತ್ಯ ಮಾಡುತ್ತಿದ್ದು, ಮೆರವಣಿಗೆಯಲ್ಲಿ ಡಿಜೆ ಸೌಂಡ್ ಹೆಚ್ಚು ಗಮನಸೆಳೆಯಿತು.
ಮೆರವಣಿಗೆಯಲ್ಲಿ ಸಾಗುವವರಿಗೆ ಅಲ್ಲಲ್ಲಿ ತಂಪಾದ ಪಾನಿಯ, ನೀರು, ಐಸ್ ಕ್ರೀಂ ವಿತರಿಸಲಾಗುತ್ತಿತ್ತು. ದಾರಿ ಉದ್ದಲಕ್ಕೂ ಪ್ಲಾಸ್ಟಿಕ್ ಲೋಟ, ಬಾಟಲ್ ಬಿದ್ದಿರುವುದು ಕಂಡು ಬಂದಿತು. ಮುನ್ನೆಚ್ಚರಿಕ ಕ್ರಮವಾಗಿ ಅಲ್ಲಲ್ಲಿ ಕ್ಯಾಮರ ಕಣ್ಣುಗಳ ಮೂಲಕ ಪೊಲೀಸರು ಸೆರೆ ಹಿಡಿಯುತಿದ್ದರು. ಹಳೇಮಟನ್ ಮಾರ್ಕೇಸ್ ಬಳಿ ಡಬಲ್ ಟ್ಯಾಂಕ್ ವೃತ್ತದಲ್ಲಿ ಕೆಲ ಮುಸ್ಲಿಂ ಬಂಧವರು ಬೃಹತ್ ಬಾವುಟವನ್ನು ತಿರುಗಿಸುತ್ತಿದ್ದಾಗ ವಿದ್ಯುತ್ ಲೈನ್‌ಗಳು ಇರುವುದನ್ನು ಕಂಡ ಎಎಸ್ಪಿ ತಮ್ಮಯ್ಯ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ತಡೆಯಲು ಮುಂದಾದಗ ಅವರ ಮಾತು ಕೇಳದೇ ವಿರುದ್ಧವಾಗಿ ನಡೆದುಕೊಂಡು ವಾಗ್ವಾದ ಮಾಡಿದ ಘಟನೆ ನಡೆಯಿತು. ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಈ ವೇಳೆ ಮೋಜು ಮಾಡುವ ಕೆಲ ವಸ್ತುಗಳನ್ನು ಇಟ್ಟುಕೊಂಡಿದನ್ನು ಪೊಲೀಸರು ನೋಡಿ ಅದನ್ನ ಕಸಿದುಕೊಂಡರು. ಆದರೂ ಬಿಡದೆ ಬಾಯಿಗೆ ತೈಲ ಹಾಕಿಕೊಂಡು ಬೆಂಕಿ ಉಗುಳುತ್ತಿರುವುದು ಕಂಡು ಬಂದಿತು. ಇನ್ನು ಕಲ್ಲರ್ ಗ್ಯಾಸ್ ಆಕಾಶಕ್ಕೆ ಬಿಡುತ್ತಿದರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಡಿಜೆ ಸೌಂಡ್ ಅವಕಾಶ ನೀಡಲಾಗಿತ್ತು.
ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಹಳೆ ಮಟನ್ ಮಾರ್ಕೇಟ್ ವೃತ್ತ ಹಾಗೂ ಇನ್ನೂ ಪ್ರಮುಖ ವೃತ್ತದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಂಖಡರುವ್ಯಾಪಾರಸ್ತರು, ಆಟೋ ಚಾಲಕರು ಸೇರಿ ವಿವಿಧ ಹಣ್ಣು, ಕುಡಿಯುವ ನೀರು,ಜ್ಯೂಸ್,ಮಜ್ಜಿಗೆ ಬಂದವರಿಗೆಲ್ಲಾ ವಿತರಣೆ ಮಾಡಿದರು.

ಪ್ಲೆಕ್ಸ್ ಪೈಂಟಿಂಗ್ಸ್‌ಗಳು ಆರ್ಭಟ:
ಹಬ್ಬದ ಹಿನ್ನೆಲೆ ನಗರದ ಹಲವು ಕಡೆಗಳಲ್ಲಿ ಹಸಿರು ಬಾವುಟ ರಾರಾಜಿಸುತ್ತಿದ್ದವು. ಶುಭಾಶಯ ಕೋರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗಿದೆ. ಪ್ರಮುಖ ವೃತ್ತಗಳಲ್ಲಿ ಬಂಟಿಂಗ್ಸ್ ಕಟ್ಟಲಾಗಿತ್ತು. ಹಾಗೆಯೇ ಈದ್ ಮಿಲಾದ್ ಹಬ್ಬಕ್ಕೆ ಜಿಲ್ಲೆಯ ಸಂಸದ ಶ್ರೇಯಸ್ ಪಟೇಲ್, ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಮಾಜಿ ಶಾಸಕ ಪ್ರೀತಂಗೌಡ ಅವರ ಭಾವಚಿತ್ರ ಹಾಕಿ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಸಲಾಗಿದೆ. ಕೆಲವೆಡೆ ಬಿಳಿ ಹಾಗೂ ಕೆಂಪು ಬಾವುಟ ಸಹ ಹಾರಾಡಿದವು. ಹೇಮಾವತಿ ಪ್ರತಿಮೆಗೂ ಹಸಿರು ಬಂಟಿಂಗ್ಸ್‌ನಿಂದ ಅಲಂಕಾರ ಮಾಡಲಾಗಿದೆ.
ಪೆನ್‌ಷನ್ ಮೊಹಲ್ಲಾ, ಮಿರ್ಜಾ ಮೊಹಲ್ಲ, ಸುಭಾಷ್ ವೃತ್ತ, ಅಜಾದ್ ರಸ್ತೆ, ವಲ್ಲಬಾಯಿ ರಸ್ತೆಯಲ್ಲಿ ಬಗೆಬಗೆಯ ಬಾವುಟಗಳು, ಬಂಟಗ್ಸ್ ಹಾರಾಡುತ್ತಿವೆ.

ಪೈಪೋಟಿ:
ನಗರದಲ್ಲಿಫ್ಲೆಕ್ಸ್,ಬಂಟಿಂಗ್ಸ್‌ಗಳ ಪೈಪೋಟಿ ಹೆಚ್ಚಾಗಿತ್ತು. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೇಸರಿ ಬಾವುಟವನ್ನು ಹಾಕಲಾಗಿತ್ತು. ಅಲ್ಲದೆ ಘರ್ಜಿಸಿ ಹೇಳು ನಾವೂಬ್ಬ ಹಿಂದೂ ಎನ್ನುವ ದೊಡ್ಡ ಫ್ಲೆಕ್ಸ್‌ನ್ನು ನಗರದ ಎನ್.ಆರ್. ವೃತ್ತದಲ್ಲಿ ಹಾಕಲಾಗಿತ್ತು. ಅದೇ ಜಾಗದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಗರ್ಜಿಸಿ ಹೇಳು ನಾವು ಕನ್ನಡಿಗರು ಅದೇ ಜಾಗದಲ್ಲಿ ಹಾಕಿದ್ದಾರೆ. ಅಲ್ಲದೆ ನಗರದಾದ್ಯಂತ ಹಸಿರು ಬಾವುಟಗಳ ರಾರಾಜಿಸುತ್ತಿದ್ದವು, ಫ್ಲೆಕ್ಸ್ ಬಂಟಿಂಗ್ಸ್ ಗಳ ಮೂಲಕ ಪೈಪೋಟಿಗೆ ಇಳಿದಿದ್ದಾರೆ.

ಮಧ್ಯದಂಗಡಿ ಬಂದ್:
ಈದ್ ಮಿಲಾದ್ ಪ್ರಯುಕ್ತ ನಗರದಲ್ಲಿ ಮೆರವಣಿಗೆ ಹಿನ್ನಲೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಇರುವಂತಹ ಮಧ್ಯದ ಅಂಗಡಿಗಳನ್ನ ಬಂದ್ ಮಾಡಲಾಗಿತ್ತು. ಇದಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನ ಕಲ್ಪಿಸಲಾಗಿತ್ತು ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net