ನಗರದ ಸ್ವಚ್ಛತೆಗೆ ಪ್ರತಿಯೊಬ್ಬರು ಸಹಕರಿಸಿ

29rajesh4
Published on

ಚಾಮರಾಜನಗರ: ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.

ನಗರದ ಸುಲ್ತಾನ್ ಷರೀಫ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ವರ್ತಕರ ಸಂಘ, ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಚಾಮರಾಜನಗರ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ನಗರಸಭೆ ವತಿಯಿಂದ ವಾರ್ಡ್ ಗಳಲ್ಲಿ ಕಸದ ಡಬ್ಬಿಯನ್ನು ವಿತರಣೆ ಮಾಡಲಾಗುತ್ತಿದ್ದು ನಿವಾಸಿಗಳು ಹಸಿ ಕಸ, ಒಣ ಕಸವನ್ನು ವಿಂಗಡಿಸಿ ನೀಡುವುದರಿಂದ ನಗರದ ಸ್ವಚ್ಛತೆ ಸಾಧ್ಯವಾಗುತ್ತದೆ. ನಗರಸಭೆ ತೆಗೆದುಕೊಳ್ಳುವ ನಿರ್ಣಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ತಿಳಿಸಿದರು.

ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ನಗರವನ್ನು ಸ್ವಚ್ಛವಾಗಿಡಲು ಜನರು ಸಹಕರಿಸಬೇಕು. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಜನರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು. ಪೌರಾಯುಕ್ತ ಎಸ್.ವಿ.ರಾಮದಾಸ್ ಮಾತನಾಡಿ, ಪ್ರತಿ ಶನಿವಾರ ಸ್ವಚ್ಛ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕಲೀಲ್ ಉಲ್ಲಾ, ಮಹಮದ್ ಅಮೀಕ್,ನಾಗರಾಜು, ಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ.ರೇಣುಕಾದೇವಿ, ಸಂಘದ ಪದಾಧಿಕಾರಿಗಳಾದ ಮಹದೇವಸ್ವಾಮಿ, ಪ್ರಕಾಶ್, ಸುಬ್ರಮಣ್ಯ, ವರ್ತಕರ ಸಂಘದ ಪ್ರಕಾಶ್, ಕೈಗಾರಿಕಾ ಉದ್ಯಮ ಸಂಘದ ಅಧ್ಯಕ್ಷ ವಿ.ಪ್ರಭಾಕರ್, ಜಯಸಿಂಹ, ರೋಟರಿ ಅಧ್ಯಕ್ಷ ನಾಗರಾಜು ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net