ನಗರದ ವಸತಿ ನಿಲಯಕ್ಕೆ ಎಡಿಸಿ ದಿಢೀರ್ ಭೇಟಿ: ಪರಿಶೀಲನೆ

ನಗರದ ವಸತಿ ನಿಲಯಕ್ಕೆ ಎಡಿಸಿ ದಿಢೀರ್ ಭೇಟಿ: ಪರಿಶೀಲನೆ
Published on

ಹಾಸನ:  ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರು ವಸತಿ ನಿಲಯಗಳಿಗೆ ಬುಧವಾರ ರಾತ್ರಿ ದಿಢೀರ್ ಭೇಟಿ ನೀಡಿ ವಸತಿ ನಿಲಯಗಳ ವ್ಯವಸ್ಥೆ, ಸ್ವಚ್ಛತೆಯನ್ನು ಪರಿಶೀಲಿಸಿದರು.

ನಗರದ ಡಿ.ದೇವರಾಜ್ ಅರಸ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಡಾ. ಬಿ.ಆರ್ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಅವರು, ವಸತಿ ನಿಲಯಗಳ ಅಡುಗೆ ಕೋಣೆ, ವಿದ್ಯಾರ್ಥಿಗಳ ಕೊಠಡಿಗಳು, ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿಗಳನ್ನು ಪರಿಶೀಲಿಸಿದರು. ವಸತಿ ನಿಲಯಗಳು ಉತ್ತಮವಾಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳನ್ನು ಕಲಿಕೆಯ ಕಡೆ ಹೆಚ್ಚಿನದಾಗಿ ಪ್ರೋತ್ಸಾಹಿಸಿ ಕಳೆದ ಬಾರಿಕ್ಕಿಂತ ಈ ಬಾರಿ ಹೆಚ್ಚಿನ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದು ನಿಲಯ ಮೇಲ್ವಿಚಾರಕರಿಗೆ ಸೂಚಿಸಿದರು.ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಉತ್ತಮ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಹಾಲು, ಮೊಟ್ಟೆ, ಬಾಳೆಹಣ್ಣು ನೀಡುವಂತೆ ತಿಳಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ:

ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಎಡಿಸಿ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಲಭಿಸುತ್ತಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಿನ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ತಮ್ಮ ಉತ್ತಮ ಭವಿಷ್ಯ ರೂಪಿಕೊಳ್ಳಬೇಕು ಎಂದರು.

ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ವ್ಯವಸ್ಥೆಗಳಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲೂ ಹೆಚ್ಚಿನ ಆಸಕ್ತಿವಹಿಸಿ ಉತ್ತಮ ಅಂಕಗಳನ್ನು ಗಳಿಸಬೇಕು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಬೇಕು ಎಂದರು.

ತಾಲೂಕು ಮಟ್ಟದ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net