ನಗರದ ರಸ್ತೆಗಳಲ್ಲಿ ನಡಿಗೆಯಲ್ಲಿ ಬಂದ ದಸರಾ ಗಜಪಡೆ

DSC_2651
Published on

ಮೈಸೂರು: ನಾಲ್ಕು ದಿನಗಳ ಹಿಂದೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಿಂದ ಬಂದು ನಗರದ ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದ ಆನೆಗಳನ್ನು ಮಂಗಳವಾರ ಬೆಳಗ್ಗೆ ಕಾಲ್ನಡಿಗೆಯಲ್ಲಿ ಕರೆತರಲಾಯಿತು.
ಅರಣ್ಯ ಭವನದ ಆವರಣದಲ್ಲಿ ಬೆಳಗ್ಗೆ ಅರಣ್ಯ ಇಲಾಖೆಯಿಂದ ಡಿಸಿಎಫ್ ಸೌರಭ್‌ಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಪೂಜೆ ಸಲ್ಲಿಸಿ ಆನೆಗಳನ್ನು ಬೀಳ್ಕೊಟ್ಟರು. ಅಶೋಕಪುರಂನಿಂದ ಹೊರಟ ಆನೆಗಳು ಬಲ್ಲಾಳ್ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರ ತಲುಪಿದವು. ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಕಂಜನ್ ಆನೆ ವಾಹನಗಳ ಸದ್ದುಗದ್ದಲಕ್ಕೆ ಬೆಚ್ಚದೆ ಶಾಂತ ರೀತಿಯಲ್ಲೆ ಹೆಜ್ಜೆ ಹಾಕಿದ. ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಆನೆಗಳನ್ನು ಕಂಡ ಕೆಲವರು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡರು.

ಹುಲಿ ಸೆರೆ ಕಾರ್ಯಾಚರಣೆಗೆ ‘ಅರ್ಜುನ’
ನಾಡಹಬ್ಬದಲ್ಲಿ ಭಾಗವಹಿಸಲು ಆಗಮಿಸಿದ್ದ ಆನೆ ‘ಅರ್ಜುನ’ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಲು ತೆರಳಿದ್ದರಿಂದ ಸ್ವಾಗತ ಕಾರ್ಯಕ್ರಮದಿಂದ ಹೊರಗೆ ಉಳಿಯುವಂತಾಯಿತು.
ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಸೋಮವಾರ ಬಾಲಕನನ್ನು ಬಲಿ ಪಡೆದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಮಂಗಳವಾರ ಬೆಳಗ್ಗೆಯೇ ಅರಣ್ಯ ಇಲಾಖೆಯ ವಾಹನದಲ್ಲಿ ಕರೆದೊಯ್ದಿದ್ದರಿಂದ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನನಿಗೆ ಸ್ವಾಗತ ದೊರೆಯಲಿಲ್ಲ. ಎರಡನೇ ತಂಡದ ಆನೆಗಳೊಂದಿಗೆ ಅರ್ಜುನನನ್ನು ಅರಮನೆ ಅಂಗಳಕ್ಕೆ ಕರೆತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.

ಕಣ್ತುಂಬಿಕೊಂಡ ಪ್ರವಾಸಿಗರು
ದಸರಾದಲ್ಲಿ ಭಾಗವಹಿಸುವ ಗಜಪಡೆ ಆಗಮನ ಕಾರ್ಯಕ್ರಮವನ್ನು ದೇಶ, ವಿದೇಶದ ಪ್ರವಾಸಿಗರು, ಸಾರ್ವಜನಿಕರು ಕಣ್ತುಂಬಿಕೊಂಡರು. ಅರಮನೆ ದ್ವಾರದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಆಚೆ ನಿಂತು ಆನೆಗಳ ಚಿತ್ರಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡರಲ್ಲದೆ, ಗಣ್ಯರತ್ತ ಕೈಬೀಸಿ ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net