

ಹಾಸನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಪಂ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನವೂ ಮುಂದುವರಿಯಿತು.
ಕರ್ತವ್ಯ ಬಹಿಷ್ಕರಿಸಿ ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ಕಾರ್ಯದರ್ಶಿಗಳು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಎಲ್ಲ ಸಿಬ್ಬಂದಿ ವರ್ಗ (ಪಂಚ ನೌಕರರು) ಭಾಗಿಯಾಗಿ ತಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಈ ಹೋರಾಟ ಬೆಂಬಲಿಸಿ ಮಾಜಿ ಸಚಿವ ಹಾಗೂ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ, ಬೇಲೂರು ಶಾಸಕ ಎಚ್.ಕೆ.ಸುರೇಶ್ ಕೆಲಹೊತ್ತು ಧರಣಿಯಲ್ಲಿ ಭಾಗಿಯಾದರು.ಪ್ರತಿಭಟನಾಕಾರರಂತೆಯೇ ಶಾಸಕ ಸುರೇಶ್ ಸಹ ಕಪ್ಪುಪಟ್ಟಿ ಧರಿಸಿ ಬೆಂಬಲ ಸೂಚಿಸಿದರು.
ನಂತರ ಮಾತನಾಡಿದ ಎಚ್.ಡಿ.ರೇವಣ್ಣ, ಪದೆ ಪದೆ ದೆಹಲಿಗೆ ಹೋಗುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವ ಬುದ್ಧಿಯನ್ನು ಚಾಮುಂಡೇಶ್ವರಿ ತಾಯಿ ರಾಜ್ಯದ ಸಚಿವರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ. ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದರೂ ಅಭಿವೃದ್ಧಿ ಶೂನ್ಯವಾಗಿದೆ. ಸಚಿವರೆಲ್ಲ ಮೈಸೂರು ಜಂಬೂ ಸವಾರಿಗೆ ತೆರಳಿದ್ದಾರೆಂದು ಛೇಡಿಸಿದರು.
ಗ್ರಾಮ ಪಂಚಾಯಿತಿ ನೌಕರರು ಐಷಾರಾಮಿ ಜೀವನ ನಡೆಸುತ್ತಿಲ್ಲ. ಪ್ರಸ್ತುತ ಸಿಗುತ್ತಿರುವ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಕೆಲಸದೊತ್ತಡವೂ ಹೆಚ್ಚಿರುವುದರಿಂದ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗ್ರಾಮ ಪಂಚಾಯಿತಿ ನೌಕರರು ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದ್ದು ಯಾವ ಕಾರಣಕ್ಕೂ ಹಿಂದೆ ಸರಿಯಬಾರದು. ಬೆದರಿಕೆಗಳಿಗೆ ಹೆದರದೆ ಶೇ. 50 ರಷ್ಟು ಬೇಡಿಕೆ ಈಡೇರುವ ವರೆಗೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಬೆಳಗಾವಿ ಅಧಿವೇಶನದಲ್ಲಿ ನಾವೂ ಸಹ ಈ ವಿಚಾರ ಪ್ರಸ್ತಾಪಿಸುತ್ತೇವೆಂದು ಭರವಸೆ ನೀಡಿದರು.
ಈ ಸರ್ಕಾರದಿಂದ ನಿಮಗೆ ನ್ಯಾಯ ಸಿಗದಿದ್ದರೆ ಇನ್ನು ಮೂರು ವರ್ಷ ಕಾಯಬೇಕಾಗುತ್ತದೆ. ದಸರಾ ಹಬ್ಬ ಮಾಡಬೇಕಿದ್ದ ಮಹಿಳಾ ನೌಕರರು ಮನೆ ಬಿಟ್ಟು ಇಲ್ಲಿ ಕೂರುವಂತಾಗಿದೆ. ನೌಕರರ ಹೊಟ್ಟೆ ಉರಿಸುವಂತಹ ಪಾಪದ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. 1986ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ನನಗೆ ಇಲ್ಲಿನ ಕೆಲಸದೊತ್ತಡದ ಅರಿವಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಭಾಗದಿಂದ ಬಂದಿದ್ದಾರೆ. ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನೌಕರರ ವರ್ಗಾವಣೆ ಅವೈಜ್ಞಾನಿಕವಾಗಿದೆ. ಹೊರ ಜಿಲ್ಲೆಗೆ ವರ್ಗ ಮಾಡಿದರೆ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ ಹೀಗೆ ಮುಂದುವರೆದರೆ ಅದರ ಪರಿಣಾಮ ಮುಂದಿನ ಮೂರು ದಿನಗಳಲ್ಲಿ ಗೋಚರವಾಗುತ್ತದೆ. ಗ್ರಾಮ ಪಂಚಾಯಿತಿ ನಿರ್ವಹಣೆ ಸುಲಭದ ಕೆಲಸವಲ್ಲ. ನೀರುಗಂಟಿ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ವೇತನ ಹೆಚ್ಚಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ನೀಡುತ್ತಿರುವ ಗೌರವ ಧನವೂ ಕಡಿಮೆಯಿದೆ. ಸಾರ್ವಜನಿಕ ಸೇವೆಗೆ ಬರುವ ಅವರಿಗೆ ಕನಿಷ್ಟ ಗೌರವ ಧನ ಸಿಗುವಂತಾಗಬೇಕು. ನೌಕರರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಒಳ್ಳೆಯ ಬುದ್ದಿಯನ್ನು ಸರ್ಕಾರಕ್ಕೆ ಚಾಮುಂಡಿ ತಾಯಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆಂದರು.
ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ ಮನೋಹರ್, ಪ್ರಧಾನ ಕಾರ್ಯದರ್ಶಿ ಎಚ್.ಜಿ.ಪರಮೇಶ್, ಖಜಾಂಚಿ ಮಂಜುನಾಥ್ ಮೊದಲಾದವರು ಕಪ್ಪುಪಟ್ಟಿ ಧರಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು.