ನಗರದ 30 ಕಡೆ ಪೊಲೀಸರಿಂದ ವಾಹನ ತಪಾಸಣೆ

ನಗರದ 30 ಕಡೆ ಪೊಲೀಸರಿಂದ ವಾಹನ ತಪಾಸಣೆ
Published on

ಹಾಸನ: ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲಿಸದೆ ಬೇಕಾಬಿಟ್ಟಿ ವಾಹನಗಳನ್ನು ಓಡಿಸುತ್ತಿದ್ದವರಿಗೆ ಸೋಮವಾರ ನಗರದ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಮೇರೆಗೆ ಸೋಮವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ನಗರದ ಬಹುತೇಕ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಂತೆ ತಂಡ ರಚಿಸಿ, 30 ಸ್ಥಳಗಳಲ್ಲಿ ವಾಹನ ತಪಾಸಣೆಗೆ ನಿಯೋಜನೆ ಮಾಡಲಾಗಿತ್ತು. ಅಡ್ಡಾದಿಡ್ಡಿ ವಾಹನ ಓಡಿಸುವವರಿಗೆ, ಹೆಲ್ಮೆಟ್ ಇಲ್ಲದವರಿಗೆ ಮತ್ತು ಸಂಚಾರಿ ನಿಯಮವನ್ನು ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು.

ನಗರಕ್ಕೆ ಬರುವಂತಹ ಎಲ್ಲಾ ರಸ್ತೆಗಳಲ್ಲಿಯೂ ಕೂಡ ಈ ರೀತಿ ತಪಾಸಣೆ ಕಾರ್ಯಾಚರಣೆ ನಡೆಯಿತು. ಒಂದು ಕಡೆ ತಪ್ಪಿಸಿಕೊಂಡು ಹೋದವರು ಮತ್ತೊಂದೆ ಕಡೆ ಪೊಲೀಸರಿಗೆ ಸಿಕ್ಕಿಕೊಳ್ಳುತ್ತಿದ್ದರು. ಇನ್ನೂ ಕೆಲ ವಾಹನ ಸವಾರರಂತೂ ಪೊಲೀಸರನ್ನು ಕಂಡೊಡನೆ ಅತಿ ವೇಗವಾಗಿ ಹೋಗುತ್ತಿದ್ದರು. ಮೊದಲ ದಿನ ನಗರದಲ್ಲಿ 30ಕ್ಕೂ ಹೆಚ್ಚು ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಯಿತು. 6 ಇನ್ಸ್‌ಪೆಕ್ಟರ್, 25 ಸಬ್‌ಇನ್ಸ್‌ಪೆಕ್ಟರ್ ಮತ್ತು ಎಎಸ್‌ಐ, ಹಾಗೂ 100 ಸಿಬ್ಬಂದಿ ಕಾರ‌್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ .ಒಟ್ಟು 400 ಹೆಚ್ಚು ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದದ್ದಾರೆ ಎಂದು ಡಿವೈಎಸ್‌ಪಿ ಉದಯ್ ಭಾಸ್ಕರ್ ತಿಳಿಸಿದರು.

ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ

ಈ ರೀತಿ ಕಾರ್ಯಾಚರಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗಳು ಕೇಳಿಬರುತ್ತಿವೆ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗದೆ ಸಂಚಾರಿ ಪೊಲೀಸರು ಪ್ರತಿನಿತ್ಯ ಕಾರ್ಯಾಚರಣೆ ಮಾಡಬೇಕು. ಇದರ ಜತೆಗೆ ಟ್ರಾಫಿಕ್ ಸಮಸ್ಯೆ ತೀವ್ರತರವಾಗಿದ್ದು, ಅದರ ಬಗ್ಗೆಯೂ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net