ನಗರಗಳಲ್ಲಿ ಹೆಚ್ಚಿಸಿ ದಡಾರ ಲಸಿಕೆ ಜಾಗೃತಿ- ಡಿಸಿ ಶಿವಾನಂದ ಕಾಪಶಿ

dc.jpg
Published on

ದಾವಣಗೆರೆ: ಐದು ವರ್ಷದೊಳಗಿನ ಮಕ್ಕಳು ದಡಾರ ಹಾಗೂ ರುಬೆಲ್ಲಾ ಲಸಿಕೆ ಹಾಕಿಸಿಕೊಳ್ಳುವ ಸಂಬಂಧ, ನಗರ ಪ್ರದೇಶಗಳಲ್ಲಿ ಕಸ ಸಂಗ್ರಹ ವಾಹನಗಳಲ್ಲಿ ಧ್ವನಿಮುದ್ರಿತ ಸಂದೇಶಗಳನ್ನು ಬಿತ್ತರಿಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಡಾರ ಲಸಿಕಾ ಅಭಿಯಾನದ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು. ದಡಾರ ಹಾಗೂ ರುಬೆಲ್ಲ ಲಸಿಕೆಯ ಎರಡನೆ ಡೋಸ್ ನೀಡಿಕೆ ಪ್ರಮಾಣ ಜಿಲ್ಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದೆ. ಈ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಆರೋಗ್ಯಾಧಿಕಾರಿಗಳು ವಿಶೇಷ ಗಮನ ಹರಿಸಿ ಎಂದು ಸೂಚಿಸಿದರು. ವಿಶ್ವ ಆರೋಗ್ಯ ಸಂಘಟನೆಯ ಸಲಹಾ ವೈದ್ಯ ಡಾ. ಶ್ರೀಧರ್ ಮಾತನಾಡಿ, ದಡಾರ ರೋಗಕ್ಕೆ ಎರಡು ವರ್ಷಗಳಲ್ಲಿ ಎರಡು ಲಸಿಕೆ ನೀಡಬೇಕು. ಎರಡನೇ ಲಸಿಕೆ ಪಡೆಯದ ಮಕ್ಕಳಿಗೆ ಐದು ವರ್ಷದವರೆಗೂ ಅವಕಾಶ ಇರುತ್ತದೆ ಎಂದು ತಿಳಿಸಿದರು. ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ 26170 ಮಕ್ಕಳಿಗೆ ಲಸಿಕೆ ನೀಡುವ ಗುರಿ ನೀಡಲಾಗಿತ್ತು. ಇದುವೆರೆಗೆ (ಒಂಬತ್ತು ತಿಂಗಳೊಳಗಿನ) 22137 ಮಕ್ಕಳಿಗೆ ನೀಡುವ ಮೊದಲ ಡೋಸ್ ನೀಡಲಾಗಿದೆ. 19304 (ಒಂದೂವರೆ ವರ್ಷದ) ಮಕ್ಕಳಿಗೆ ಎರಡನೇ ಡೋಸ್ ಪೂರೈಸಲಾಗಿದೆ ಎಂದರು. ದಡಾರ ಹಾಗೂ ರುಬೆಲ್ಲಾ ಸಮೀಕ್ಷೆಯಲ್ಲಿ ಹೆಚ್ಚು ಪ್ರಕರಣಗಳ ಪರೀಕ್ಷೆ ನಡೆಸಿದ ಜಗಳೂರು ತಾಲ್ಲೂಕು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಜಯಕುಮಾರ್ ಅವರ ಕಾರ್ಯಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಡಿಎಚ್‌ಒ ನಾಗರಾಜ್, ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ. ಷಣ್ಮುಖಪ್ಪ, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಪಾಲಿಕೆ ಆರೋಗ್ಯಾಧಿಕಾರಿ ಸುಧೀಂದ್ರ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಧರಣಿಕುಮಾರ್, ಮಹಿಳಾ ಆಸ್ಪತ್ರೆ ಅಧೀಕ್ಷಕ ಡಾ. ಮಧು, ಡಾ.ನಟರಾಜ್, ಡಾ. ರೇಣುಕಾರಾಧ್ಯ, ಡಾ. ಮುರಳೀಧರ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net