

ಚನ್ನರಾಯಪಟ್ಟಣ: ನಗರ ನಿವಾಸಿಗಳು ಸಹಕಾರ ನೀಡಿದ್ದಲ್ಲಿ ಮಾತ್ರ ಎಲ್ಲ ಬಡಾವಣೆಗಳ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ರಾಧಾ ಮಂಜುನಾಥ್ ಹೇಳಿದರು.
ಪಟ್ಟಣದ 3ನೇ ವಾರ್ಡ್‌ನಲ್ಲಿ ಪುರಸಭೆ ವತಿಯಿಂದ ಸ್ವಚ್ಛ ಸರ್ವೇಕ್ಷಣ-2023ರಡಿ ಗುರುವಾರ ಆಯೋಜಿಸಿದ್ದ ನಮ್ಮ ಚಿತ್ತ ಸ್ವಚ್ಛತೆಯತ್ತ ಕಾರ್ಯಕ್ರಮ ಹಾಗೂ ಸ್ವಚ್ಛತಾ ಆಂದೋಲನಾ ಅರಿವು ಜಾಥಾಗೆ ಚಾಲನೆ ನೀಡಿ ಮಾತನಾಡಿ, ನಾಗರಿಕರು ತಮ್ಮ ಮನೆಯ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಪುರಸಭೆಯ ವಾಹನಗಳಿಗೆ ನೀಡುವುದರಿಂದ ಪಟ್ಟಣವನ್ನು ಹೆಚ್ಚಿನ ರೀತಿಯಲ್ಲಿ ಸ್ವಚ್ಛವಾಗಿಡಬಹುದು ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್ ಮಾತನಾಡಿ, ಪೌರಕಾರ್ಮಿಕರ ಮೂಲಕ ಎಲ್ಲ ವಾರ್ಡ್‌ಗಳ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಲಿದ್ದೇವೆ. ಅಗತ್ಯ ಸ್ಥಳಗಳಲ್ಲಿ ಬಿತ್ತಿಪತ್ರಗಳನ್ನು ಅಂಟಿಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಕಸ ಮುಕ್ತ ಹಾಗೂ ಸ್ವಚ್ಛ ಪಟ್ಟಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಪಟ್ಟಣ ನಿರ್ಮಾಣಕ್ಕೆ ಅಧಿಕಾರಿಗಳೊಂದಿಗೆ ನಗರ ನಿವಾಸಿಗಳು ಕೈ ಜೋಡಿಸಬೇಕು ಎಂದು ಕೋರಿದರು.
3ನೇ ವಾರ್ಡ್‌ನ ಪುರಸಭಾ ಸದಸ್ಯ ಮೋಹನ್ ಮಾತನಾಡಿ, ತ್ಯಾಜ್ಯ ನಿರ್ವಹಣೆಯಲ್ಲಿ ಬೇಯಿಸಿದ, ಹಸಿ ಆಹಾರ, ಹಣ್ಣು -ತರಕಾರಿ, ಹೂವಿನ ತ್ಯಾಜ್ಯ, ಒಣ ಎಲೆ, ಮತ್ತಿತರ ಕೊಳೆಯುವ ಪದಾರ್ಥಗಳನ್ನು ಹಸಿ ಕಸವನ್ನಾಗಿ ಹಾಗೂ ಪೇಪರ್, ಪ್ಲಾಸ್ಟಿಕ್, ಕಟ್ಟಿಗೆ, ಲೋಹ, ಬಟ್ಟೆ, ಗಾಜು, ರಬ್ಬರ್, ವೈರ್, ಹಳೇ ವಿದ್ಯುತ್ ಉಪಕರಣಗಳ ಬಿಡಿ ಭಾಗಗಳು ಸೇರಿದಂತೆ ಕೊಳೆಯದ ಪದಾರ್ಥಗಳನ್ನು ಒಣ ಕಸವನ್ನಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕು ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ಕಸವನ್ನು ಸುಡಬಾರದು. ಇದರಿಂದ ವಾಯು ಮಾಲಿನ್ಯ ಉಂಟಾಗಿ ಚರ್ಮ ಕಾಯಿಲೆ, ಅಸ್ತಮಾ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅಲ್ಲದೆ ಮಣ್ಣಿನಲ್ಲಿ ವಿಷಯುಕ್ತ ಅಂಶ ಬೆರೆತು ಫಲವತ್ತತೆ ನಾಶವಾಗುತ್ತದೆ. ಇದರಿಂದ ಮರಗಿಡಗಳ ಬೆಳವಣಿಗೆ ತೊಂದರೆಯಾಗಿ ಪರಿಸರ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಡಿ.ಪಿ.ರಾಜು ಮಾತನಾಡಿದರು. ಪರಿಸರ ಇಂಜಿನಿಯರ್ ಕಾವ್ಯಶ್ರೀ, ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಕಿ ಉಮಾದೇವಿ, ವಾಟರ್‌ಮ್ಯಾನ್ ಉಮೇಶ್ ಹಾಗೂ ಪೌರಕಾರ್ಮಿಕರು ಇದ್ದರು.