ನಗರ ಸ್ವಚ್ಚತೆಗೆ ಸಹಕರಿಸಿ: ನಟರಾಜ್

ನಗರ ಸ್ವಚ್ಚತೆಗೆ ಸಹಕರಿಸಿ: ನಟರಾಜ್
Published on

ಆಲೂರು: ಮನೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ವಿಂಗಡಿಸಿ ವಿಲೇವಾರಿ ಮಾಡಲು ಸಹಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ, ಹಸಿರು ನ್ಯಾಯಾಧೀಕರಣ ಪೀಠದ ನಿರ್ದೇಶನದಂತೆ ಘನತ್ಯಾಜ್ಯ ವಿಲೇವಾರಿ ಕುರಿತು ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಮನೆಗಳಲ್ಲಿ ಉತ್ಪತ್ತಿಯಾಗುವ ಒಣ, ಹಸಿ ಕಸ, ಪ್ಲಾಸ್ಟಿಕ್, ಗಾಜು ಇತರೆ ತ್ಯಾಜ್ಯವನ್ನು ಒಟ್ಟಿಗೆ ಹಾಕದೆ ವಿಂಗಡಿಸಿ ವಿಲೇವಾರಿ ಮಾಡಬೇಕು. ಹಸಿ ಕಸವನ್ನು ಒಟ್ಟುಗೂಡಿಸಿ ತ್ಯಾಜ್ಯ ನೀರು ಬಳಸಿಕೊಂಡು ಮನೆಯಲ್ಲಿರುವ ಗಿಡಗಳಿಗೆ ಬಳಸಿದರೆ ಗೊಬ್ಬರವಾಗುತ್ತದೆ. 

ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯಗಳು, ಕಾಲೇಜುಗಳು, ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಪಾರ್ಕ್, ಉದ್ಯಾನವನಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸದರಿ ಸ್ಥಳಗಳಲ್ಲಿ ಪ್ರೊಸೆಸಿಂಗ್ ಮಾಡಬೇಕು. ಸದ್ಯದಲ್ಲೆ ಪ್ರಮುಖ ಸ್ಥಳಗಳಲ್ಲಿ ಪರಿಸರ ಸ್ನೇಹಿ ಲಿಟರ್ ಬಿನ್ಸ್ಗಳನ್ನು ಇಡಲಾಗುವುದು. ರಸ್ತೆ ಬದಿಯಲ್ಲಿ ಕಸ ಹಾಕುವವರನ್ನು ಗುರುತಿಸಿ ದಂಡದ ಜೊತೆಗೆ ಪ್ರಕರಣ ದಾಖಲಿಸಲಾಗುವುದು ಎಂದರು.

ಸ್ವಚ್ಚತಾ ಆಂದೋಲನ ರಾಯಭಾರಿ ಎಂ. ಪಿ. ಹರೀಶ್ ಮಾತನಾಡಿ,ಆಡಳಿತದ ಜೊತೆ ಸಾರ್ವಜನಿಕರು ಸಹಕರಿಸಬೇಕು. ಪ್ಲಾಸ್ಟಿಕ್ ಬಳಕೆ ತಪ್ಪಿಸಲು ಪ್ರತಿ ಮನೆಗೆ ಸುಮಾರು ೧೦ ಕೆ.ಜಿ. ತೂಕ ಹೊರುವಂತಹ ಬಟ್ಟೆ ಬ್ಯಾಗ್ ವಿತರಣೆ ಮಾಡಿದರೆ ಕ್ರಮೇಣವಾಗಿ ಪ್ಲಾಸ್ಟಿಕ್ ಬಳಕೆ ತಡೆಯಬಹುದು ಎಂದರು.

ಉಪಾಧ್ಯಕ್ಷ ನಿಂಗರಾಜು (ಪಾಪು) ಸಭೆ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಕ ಮಂಜುನಾಥ್, ಪಟ್ಟಣ ಪಂಚಾಯಿತಿ ಸ್ವಚ್ಚತಾ ಸಿಬ್ಬಂದಿಗಳು, ಕಲ್ಯಾಣ ಮಂಟಪ ಮಾಲೀಕರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net