ನಗರ ಸಭೆ ಆವರಣದ ಎದುರು ಪೌರಕಾರ್ಮಿಕರ ಪ್ರತಿಭಟನೆ

03_HSN_06
Published on

ಹಾಸನ: ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸಲು ಶ್ರಮಿಸುತ್ತಿರುವ ಖಾಯಂ ಪೌರಕಾರ್ಮಿಕರಿಗೆ ನಿವೇಶನ ನೀಡಿ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪೌರಕಾರ್ಮಿಕರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.

ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಗುರುವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ, ನಾವು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ ಆದರೆ ನಮಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ ಎಂದರು.

ಈಗಾಗಲೇ ನಗರಸಭೆ ವತಿಯಿಂದ 42 ಜನರಿಗೆ ನಿವೇಶನ ನೀಡಿ ಹಕ್ಕುಪತ್ರ ವಿತರಿಸಿ, ಗೃಹಭಾಗ್ಯ ಯೋಜನೆಯಡಿ ವಸತಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ ನಾಲ್ಕೈದು ವರ್ಷಗಳು ಕಳೆದರೂ ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದಲ್ಲ ಒಂದು ಕಾರಣದಿಂದ ವಿಳಂಬವಾಗುತ್ತಿದೆ. ತಕ್ಷಣವೇ ಇದನ್ನ ಪೂರ್ಣಗೊಳಿಸಬೇಕು ಮತ್ತು ಉಳಿದಿರುವಂತಹ ಪೌರಕಾರ್ಮಿಕರಿಗೆ ಕೂಡ ಎರಡನೇ ಹಂತದಲ್ಲಿ ವಸತಿ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಮುಖಂಡರಾದ ಕೃಷ್ಣದಾಸ, ರಾಜೇಶ್, ಕುಮಾರಸ್ವಾಮಿ, ಹೇಮಂತ್ ಸೇರಿದಂತೆ ಇತರರು ಇದ್ದರು.

ಪೌರಕಾರ್ಮಿಕರುಗೆ ಶಾಸಕರು ಭರವಸೆ:

ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಾಮಾನ್ಯಸಭೆಗೆ ಆಗಮಿಸಿದ ಶಾಸಕ ಸ್ವರೂಪ್‌ಪ್ರಕಾಶ, ಪ್ರತಿಭಟನಾಕಾರರ ಸಮಸ್ಯಯನ್ನ ಆಲಿಸಿನಂತರ ಮಾತನಾಡಿ, ನಿಮ್ಮ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರವನ್ನ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net