

ಹಾಸನ: ಮಾನಸಿಕ ಹಾಗು ದೈಹಿಕ ಸದೃಢತೆಗೆ ಕ್ರೀಡೆ ಮುಖ್ಯವಾಗಿದ್ದು ಸೋಲು ಗೆಲುವಿನ ಕುರಿತು ಚಿಂತಿಸದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಣ ಅವರು ಸಲಹೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮಿಕೊಂಡಿದ್ದ ನಗರ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಾರೀರಿಕ ಹಾಗು ಮಾನಸಿಕ ವಿಕಸನ ಸಾಧ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಅಧ್ಯಯನಕ್ಕೆ ಮಾತ್ರ ಸೀಮಿತರಾಗಬಾರದು. ಕ್ರೀಡೆಯಲ್ಲೂ ಸಾಧನೆ ಮಾಡಬಹುದು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಅವರು ಮಾತನಾಡಿ, ಮಕ್ಕಳು ದೈಹಿಕವಾಗಿ ಸದೃಢರಾದಾಗ ಮಾತ್ರ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ. ಮಕ್ಕಳು ಪಾಠದ ಜೊತೆಗೆ ತಮ ಆಸಕ್ತಿ ಕ್ಷೇತ್ರದ ಕಡೆಗೆ ಗಮನ ಹರಿಸಬೇಕು ಎಂದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಣ್ಣೇಗೌಡ, ರವೀಂದ್ರ, ಶಿಕ್ಷಣ ಸಂಯೋಜಕ ಕೃಷ್ಣ, ಸಿಆರ್‌ಪಿ ಚಂದ್ರಕಾಂತ, ಅನಂತಕುಮಾರ, ಮುಬೀನಾ ಕೌಸರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೇದ ಮೂರ್ತಿ ಇತರರಿದ್ದರು.