ನಗರ ಪ್ರದೇಶದ ಮರಗಳ ಹನನ ತಡೆಗೆ ಆಗ್ರಹ

11
Published on

ಮೈಸೂರು: ನಗರ ಪ್ರದೇಶಗಳಲ್ಲಿರುವ ಮರಗಳನ್ನು ಕಡಿಯದಂತೆ ಒತ್ತಾಯಿಸಿ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಮಹಾನಗರ ಪಾಲಿಕೆ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ಮರಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಪಾಲಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಸೇರಿದಂತೆ ರಾಜ್ಯಾದ್ಯಂತ ಇರುವ ನಗರ ಪ್ರದೇಶಗಳಲ್ಲಿ ಮರಗಳನ್ನು ಉಳಿಸಲು ಮತ್ತು ಬಿದ್ದು ಹೋಗುವ ಮರಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಸರ್ಕಾರಕ್ಕೆ ನಷ್ಟವಾಗುತ್ತಿರುವುದು ಒಂದೆಡೆಯಾದರೆ, ಸಿಕ್ಕ ಸಿಕ್ಕಲ್ಲೆಲ್ಲ ಮರಗಳ ಹನನ ಮಾಡುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ ಎಂದು ಕಿಡಿಕಾರಿದರು.

ನಿಯಮಬಾಹಿರವಾಗಿ ಉದ್ಯಾನವನಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡುತ್ತಿರುವುದರಿಂದಲೂ ಪರಿಸರ ನಾಶವಾಗುತ್ತಿದೆ. ಮರಗಳ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ನಷ್ಟವುಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಮರಗಳ ಮೌಲ್ಯವನ್ನು ಸರಿಯಾಗಿ ನಿಗದಿ ಮಾಡದೆ, ಕಡಿಮೆ ಮೌಲ್ಯ ನಿಗದಿ ಪಡಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಬೇಕು ಎಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಪರಿಸರ ಪ್ರೇಮಿಗಳಾದ ಭಾನು ಮೋಹನ್, ಅರವಿಂದ ಶರ್ಮ, ರಾಘವೇಂದ್ರ, ಮಣಿಕಂಠ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net