ನಗರ ಪ್ರದಕ್ಷಿಣೆ ಹಾಕಿದ ಜಿಲ್ಲಾಧಿಕಾರಿ

02_GDG_10_DC
Published on

ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ರಸ್ತೆ ದುರಸ್ತಿ ಸೇರಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಭಾನುವಾರ ಜಿಲ್ಲಾಧಿಕಾರಿ ಸುಂದರೇಶಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ, ಯೋಜನಾ ನಿರ್ದೇಶಕ ರುದ್ರೇಶ ನೇತೃತ್ವದಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಅಲ್ಲದೆ, ಆಗಸ್ಟ್ 15ರೊಳಗೆ ಅವಳಿ ನಗರದ ರಸ್ತೆಗಳನ್ನು ದುರಸ್ತಿ ಮಾಡಲು ಆದೇಶಿಸಿದರು.

ಒಳಚರಂಡಿ, ನಗರಾಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ಆಧಿಕಾರಿಗಳಿಗೆ ಸಮಸ್ಯೆಗಳ ಪರಿಹಾರಕ್ಕೆ ಡೆಡ್ ಲೈನ್ ನೀಡಿದರು. ನಗರದ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಮತ್ತು ಮುಳುಗುಂದ ನಾಕಾ ಸರ್ಕಲ್, ಬನ್ನಿಮಹಾಕಾಳಿ ಸರ್ಕಲ್, ಹಳೇ ಡಿಸಿ ಆಫೀಸ್ ಸರ್ಕಲ್​ನಿಂದ ತಾಲೂಕು ಕಚೇರಿ ಕಡೆಗೆ ಹೋಗುವ ರಸ್ತೆಯನ್ನು ಆಗಸ್ಟ್ 5ರೊಳಗಾಗಿ ಆರಂಭಿಸಿ ಆದಷ್ಟು ಬೇಗ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.

ಹದಗೆಟ್ಟ ರಸ್ತೆಗಳ ಪುನರ್ ನವೀಕರಣಕ್ಕಾಗಿ 2 ತಂಡ ಮಾಡಲಾಗಿದ್ದು 2 ದಿನಗಳಲ್ಲಿ ಇನ್ನು ನಾಲ್ಕು ತಂಡಗಳ ರಚನೆ ಮಾಡಿ 85 ರಸ್ತೆಗಳ ಕಾಮಗಾರಿಯನ್ನು ಆಗಸ್ಟ್ 15ರೊಳಗಾಗಿ ಮುಕ್ತಾಯಗೊಳಿಸಬೇಕು ಎಂದು ಸೂಚನೆ ನೀಡಲಾಯಿತು.

ಟಿಪ್ಪು ಸುಲ್ತಾನ್ ಸರ್ಕಲ್ ಹಾಗೂ ಬನ್ನಿಮಹಾಕಾಳಿ ಸರ್ಕಲ್ ನಲ್ಲಿರುವ ಒಳಚರಂಡಿ ಲೈನ್​ಗಳನ್ನು ಆ. 5ರೊಳಗೆ ಆರಂಭಿಸಿ ಆದಷ್ಟು ಬೇಗನೆ ಮುಕ್ತಾಯಗೊಳಿಸುವುದು. ಹಳೆ ಡಿಸಿ ಕಚೇರಿ ವಿಶ್ವ ಹೋಟೆಲ್ ಹತ್ತಿರವಿರುವ ರಸ್ತೆ ಪದೇಪದೇ ಹದಗೆಡುತ್ತಿದ್ದು ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಹಳೆ ಡಿಸಿ ಕಚೇರಿಯಿಂದ ಅಂಬೇಡ್ಕರ್ ಸರ್ಕಲ್ ( ಹೊಸ ಬಸ್ ನಿಲ್ದಾಣದ ಮುಂಭಾಗ) ಫುಟ್ಪಾತ್ ಫ್ಲವರ್​ಗಳನ್ನು ಒಂದು ವಾರದೊಳಗಾಗಿ ಸರಿ ಹೊಂದಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಹೆಚ್ಚುವರಿ ಲೇಬರ್​ಗಳನ್ನು ಉಪಯೋಗಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿಯ ಮುಕ್ತಾಯಗೊಳಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿದರು.

ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಟಿಪ್ಪು ಸರ್ಕಲ್, ಮುಳುಗುಂದ ನಾಕಾ ಸರ್ಕಲ್, ಬನ್ನಿಮಹಾಕಾಳಿ ಸರ್ಕಲ್, ಹಳೆ ಡಿಸಿ ಸರ್ಕಲ್ ಮತ್ತು ಭೂಮರೆಡ್ಡಿ ಸರ್ಕಲ್ ಸೌಂದರೀಕರಣಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಪೌರಾಯುಕ್ತ ಮನ್ಸೂರ್ ಅಲಿ ಅವರು ಆ. 5ರೊಳಗೆ ಆರಂಭಿಸಬೇಕು. ಟಿಪ್ಪು ಸರ್ಕಲ್​ನಲ್ಲಿ ರಸ್ತೆಗಳನ್ನು ಸರಿಯಾಗಿ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು, ಎಡತಿರುವಿಗೆ ಮೂರು ಕಡೆ ಅಡ್ಡಿಯಾಗಿರುವ ಬೀದಿದೀಪ ಕಂಬಗಳನ್ನು 2-3 ದಿನಗಳಲ್ಲಿ ಶಿಫ್ಟ್ ಮಾಡಬೇಕು. ಮುಳುಗುಂದ ನಾಕಾ ಸರ್ಕಲ್ ಹುಬ್ಬಳ್ಳಿ ಕಡೆಗೆ ಹೋಗುವ ಪೆಟ್ರೋಲ್ ಬಂಕ್ ಮುಂದಿನ ಭಾಗದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣವನ್ನು ನಿರ್ವಿುಸಬೇಕು. ಅಲ್ಲಿರುವ ಬೀದಿದೀಪ ಕಂಬಗಳನ್ನು 2-3 ದಿನಗಳಲ್ಲಿ ಶಿಫ್ಟ್ ಮಾಡಬೇಕು ಎಂದು ಹೇಳಿದರು.

ಬನ್ನಿಮಹಾಕಾಳಿ ಸರ್ಕಲ್ ಹತ್ತಿರವಿರುವ ತೋಟಗಾರಿಕೆ ಇಲಾಖೆ ಕಾಂಪೌಂಡನ್ನು ಹಿಂದಕ್ಕೆ ಸರಿಸಿ ಅಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣವನ್ನು ನಿರ್ವಿುಸಿ ಅಲ್ಲಿರುವ ಬೀದಿದೀಪ ಕಂಬಗಳನ್ನು 2-3 ದಿನಗಳಲ್ಲಿ ಶಿಫ್ಟ್ ಮಾಡಬೇಕು. ಹಳೆ ಡಿಸಿ ಕಚೇರಿ ಹತ್ತಿರ ಎಡತಿರುವಿಗೆ ಇರುವ ತೊಂದರೆಗಳನ್ನು ನಿವಾರಣೆ ಮಾಡಬೇಕು. ಇಲ್ಲಿ ಸಿಗ್ನಲ್ ಹಾಕುವ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹೆಯನ್ನು ಪಡೆದು ಅದನ್ನು ಸರಿಯಾಗಿ ಕ್ರಮವಹಿಸಬೇಕು. ಭೂಮರಡ್ಡಿ ಸರ್ಕಲ್​ನ ಒಂದು ಕಡೆ ಬರುವ ಫ್ರೀ ಲೆಫ್ಟ್ ರಸ್ತೆಗಳ ಸೌಂದರೀಕರಣ ಮಾಡಬೇಕು. ಕೆ ಎಚ್. ಪಾಟೀಲ ಸರ್ಕಲ್ ಹತ್ತಿರ ರಸ್ತೆಯನ್ನು ಸರಿಪಡಿಸಬೇಕು. ಜುಮ್ಮಾ ಮಸೀದಿ ಹತ್ತಿರವಿರುವ ಬೀದಿಬದಿ ಅಂಗಡಿಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಬೀದಿಬದಿ ಅಂಗಡಿಗಳ ಮಾಲೀಕರ ಮನವೊಲಿಸಿ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ಅವರ ಅಂಗಡಿಗಳನ್ನು ಸ್ಥಳಾಂತರಿಸಲು ಕ್ರಮವಹಿಸಬೇಕು. ನಂತರ ನಗರದ ಎಲ್ಲ ವಾರ್ಡ್​ಗಳಲ್ಲಿರುವ ಗುಂಡಿಗಳನ್ನು 10 ದಿನಗಳ ಒಳಗಾಗಿ ಮುಚ್ಚಿ ಸರಿಪಡಿಸಬೇಕು ಹಾಗೆ ಸ್ವಚ್ಛತೆಗೆ ಆದ್ಯತೆ ನೀಡಿ ಧೂಳು ಮುಕ್ತ ರಸ್ತೆಗಳನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು ಸೂಚನೆ ನೀಡಿದರು.

ಮುಳುಗುಂದ ಹಾಗೂ ಲಕ್ಷ್ಮೇಶ್ವರ ರಸ್ತೆಯ ಸ್ಥಳ ತನಿಖೆ ಮಾಡಲಾಗಿದ್ದು ಲೋಕೋಪಯೋಗಿ ಇಲಾಖೆಯವರು ಗುಂಡಿ ಮುಚ್ಚಿ ಸುವುದನ್ನು ಪರಿಶೀಲಿಸಿದರು. ಅದೇ ರೀತಿ ಕಳಸಾಪುರ ರಸ್ತೆ ಹಾಗೂ ಸಂಬಾಪೂರ ರಸ್ತೆಯ ಗುಂಡಿ ಮುಚ್ಚಿಸುವ ಕಾಮಗಾರಿಯನ್ನು ನಡೆಸಬೇಕು ಎಂದರು. ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯ ಕಾಮಗಾರಿಯನ್ನು ಆ. 5ರೊಳಗೆ ಆರಂಭಿಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಆದೇಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net