

ಬೀದರ್: ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಯೋಜನೆ ಶೀಘ್ರ ಜಾರಿಗೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಇಲ್ಲಿಯ ಪ್ರತಾಪನಗರದಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ನವೀಕರಿಸಿದ ಸರ್ಕಾರಿ ನೌಕರರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬಜೆಟ್ ನಲ್ಲಿ ರೂ. 50 ಕೋಟಿ ಮೀಸಲಿರಿಸಿದೆ. ಶೀಘ್ರವೇ ಈ ಸೇವೆ ನೌಕರರಿಗೆ ಸಿಗಲಿದೆ. 2022 ವೇಳೆಗೆ ರಾಜ್ಯ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ಕೊಡಿಸಲು ಹಾಗೂ ಎನ್ ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿ ಮುಂದುವರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ನೌಕರರ ಭವನದ ಅಭಿವೃದ್ಧಿ ಕಾರ್ಯಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿರುವ ರೂ. 3 ಕೋಟಿಯ ಪ್ರಸ್ತಾವಕ್ಕೆ ಮಂಜೂರಿ, ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯಲ್ಲಿನ ಬಡ್ತಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆ ಮುಂತಾದ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ ಮಾತನಾಡಿ, ಎರಡು ಅವಧಿಯಲ್ಲಿ ನೌಕರರ ಅನೇಕ ಸಮಸ್ಯೆಗಳನ್ನು ಬಗೆಹರಿಸಿರುವ ಸಂತೃಪ್ತಿ ಇದೆ. ರೂ. 3 ಕೋಟಿಯ ಪ್ರಸ್ತಾವಕ್ಕೆ ಮಂಜೂರಾತಿ ದೊರೆತರೆ ಭವನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದರು.
ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಜಗದೀಶಗೌಡ ಪಾಟೀಲ್, ವಿ.ವಿ. ಶಿವರುದ್ರಯ್ಯ, ಸತೀಶ ಪಾಟೀಲ್, ರಾಜಕುಮಾರ ಹೊಸದೊಡ್ಡೆ, ಮನೋಹರ ಕಾಶಿ, ಪ್ರಕಾಶ ಮಡಿವಾಳ, ರವೀಂದ್ರರೆಡ್ಡಿ, ಅಬ್ದುಲ್ ಖದೀರ್, ರಾಜು ಲೇಂಗಟಿ, ರಾಜಕುಮಾರ ಪಾಟೀಲ್, ಅಶೋಕ ರೆಡ್ಡಿ, ರಾಜಪ್ಪ ಪಾಟೀಲ್, ಶಿವಾನಂದ ಮೇತ್ರೆ, ಶಿವಕುಮಾರ ಘಾಟೆ, ನಾಗಶೆಟ್ಟಿ ಡುಮಣೆ, ರಾಜಕುಮಾರ ಬೇಲೂರೆ, ಲಿಂಗಾನಂದ ಮಹಾಜನ್ ಇತರರಿದ್ದರು.
ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ ನಿರೂಪಣೆ ಮಾಡಿದರು. ಬಸವರಾಜ ಜಕ್ಕಾ ವಂದಿಸಿದರು.
ಈ ವೇಳೆ ಕರೊನಾ ವಾರಿಯರ್, ಉತ್ತಮ ಶಿಕ್ಷಕರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿವಕುಮಾರ ಪಾಂಚಾಳ ವಚನ ಸಂಗೀತ ನೀಡಿದರು. ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ಹಾಗೂ ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ಅವರು ವಚನ ನೃತ್ಯ, ಭರತನಾಟ್ಯ ಪ್ರದರ್ಶಿಸಿದರು.
ಬೀದರ್ ಸರ್ಕಾರಿ ನೌಕರರ ಭವನ ಉತ್ತರ ಕರ್ನಾಟಕದಲ್ಲೇ ವಿಶಾಲ ಹಾಗೂ ಸುಸಜ್ಜಿತವಾಗಿದೆ. ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ ಅವರು ನವೀಕರಣ ಸೇರಿ ಭವನಕ್ಕೆ ವಿವಿಧ ಸೌಕರ್ಯ ಕಲ್ಪಿಸಿ ನೌಕರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನೌಕರರ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ.| ಸಿ.ಎಸ್. ಷಡಾಕ್ಷರಿಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ