ನಕ್ಸಲರ ವಿರುದ್ಧ ತನಿಖೆಗೆ ಒತ್ತಾಯಿಸಿ ಬಿಜೆಪಿ ಮನವಿ

9 ckm 15
ಚಿಕ್ಕಮಗಳೂರು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಮುಖ್ಯಮಂತ್ರಿ ಬಳಿ ಶರಣಾಗಿರುವ ನಕ್ಸಲರ ಹಿಂದಿನ ಅಪರಾಧಗಳ ಕುರಿತು ಎನ್ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
Published on

ಚಿಕ್ಕಮಗಳೂರು: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಳಿ ಶರಣಾಗಿರುವ ನಕ್ಸಲರ ಹಿಂದಿನ ಅಪರಾಧಗಳ ಕುರಿತು ಎನ್ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಮೂಲಕ ಕೇಂದ್ರದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ನಕ್ಸಲರ ಚಟುವಟಿಕೆಗಳಿಂದ ಅನೇಕ ಜೀವ ಹಾನಿ ಹಾಗೂ ಆಸ್ತಿ ಹಾನಿ ನಡೆದಿದೆ. ಕರ್ನಾಟಕದಲ್ಲಿ ತಲೆಯೆತ್ತಿದ್ದ ನಕ್ಸಲರ ಚಟುವಟಿಕೆಗಳು ಪಕ್ಕದ ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೂ ವ್ಯಾಪಿಸಿತ್ತು. ನಕ್ಸಲರಿಂದಾಗಿ ಹಲವು ಕೃಷಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜನ ಭಯದ ವಾತಾವರಣದಲ್ಲಿಯೇ ಬದುಕುವಂತಾಗಿತ್ತು. ನಕ್ಸಲರ ಗುಂಡೇಟಿಗೆ ಪೊಲೀಸರು ಬಲಿಯಾಗಿದ್ದಾರೆ. ಹೀಗಾಗಿ ನಕ್ಸಲರ ಮೇಲಿರುವ ಅಪರಾಧಗಳ ಕುರಿತು ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅಕ್ರಮ ಆಯುಧದೊಂದಿಗೆ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದ ನಕ್ಸಲರು ಲೆಕ್ಕಕ್ಕೆ ಸಿಗದಷ್ಟು ಕೃತ್ಯಗಳನ್ನು ನಡೆಸಿದ್ದಾರೆ. ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ನಕ್ಸಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರ ನಕ್ಸಲರಿಗೆ ಕ್ಷಮಾಧಾನ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಹಲವು ಕಾನೂನುಬಾಹಿರ ಅಪರಾಧ ಪ್ರಕರಣಗಳು ಸಾಕಷ್ಟು ನಡೆದಿವೆ. ಇಂಥ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕ್ಷಮಾದಾನ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಬಳಿ ಶರಣಾಗತರಾಗಿರುವ ನಕ್ಸಲರ ಕೃತ್ಯಗಳ ಬಗ್ಗೆ ತನಿಖೆ ನಡೆಸಲು ಎನ್ಐಎ ಸಂಸ್ಥೆ ನೇಮಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಸಂತೋಷ್ ಕೋಟ್ಯಾನ್, ಸಚಿನ್ ಗೌಡ, ಅಂಕಿತ, ಮಧು ಕುಮಾರ್ ರಾಜ್ ಅರಸ್, ನರೇಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net