

ಚಿತ್ರದುರ್ಗ: ನಕಲಿ ವೈದ್ಯರ ಪತ್ತೆಗೆ ಡಿಸಿ, ಎಸ್‌ಪಿ ನೇತೃತ್ವದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆಯಡಿ ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ಜಾರಿ ತಂಡಗಳನ್ನು ರಚಿಸಿ ನಕಲಿ ವೈದ್ಯರ ಪತ್ತೆಗೆ ಶೋಧ ನಡೆಸುವಂತೆ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಅವರಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಕೆಪಿಎಂಇ( ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಅಧಿನಿಯಮ)ಕುರಿತ ಜಿಲ್ಲಾ ಮಟ್ಟದ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಅರ್ಹ ವಿದ್ಯಾರ್ಹತೆ,ಅಧಿಕೃತ ನೋಂದಣಿ ಇಲ್ಲದ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರು ಹೆಚ್ಚು ಎಂಬ ದೂರುಗಳಿವೆ. ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಬೇಕು. ವಿಶೇಷ ಕಾರ್ಯಪಡೆಯ ಮಾಸಿಕ ವರದಿಯನ್ನು ಕಾಲ, ಕಾಲಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಜಿಲ್ಲೆಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ದಾಖಲೆಗಳನ್ನು ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಡಿಸಿ ಸೂಚಿಸಿದರು.
ಪರಿಶೀಲನೆ ತಂಡದಲ್ಲಿ ದಂತ ಹಾಗೂ ಆಯುಷ್ ವೈದ್ಯಾಧಿಕಾರಿಗಳನ್ನು ನೇಮಿಸಲು ಸಭೆ ತೀರ್ಮಾನಿಸಿತು.
ದಾಖಲೆಗಳ ನಿರ್ವಹಣೆ: ಕಾಯ್ದೆ ಪ್ರಕಾರ ಖಾಸಗಿ ಆಸ್ಪತ್ರೆಗಳು ಒಳರೋಗಿಗಳಿಗೆ ನೀಡಿದ ಚಿಕಿತ್ಸೆ ದಾಖಲೆಗಳನ್ನು ಕಡ್ಡಾಯವಾಗಿ 2 ವರ್ಷಗಳ ಕಾಲ ನಿರ್ವಹಿಸಬೇಕೆಂದು ಡಿಸಿ ಹೇಳಿದರು.
ಖಾಸಗಿ ವೈದ್ಯಕೀಯ ಸಂಸ್ಥೆ ರೋಗಿಗಳ ವೈದಕೀಯ ದಾಖಲೆಗಳನ್ನು ನಿಯಮಿತ ರೀತಿಯಲ್ಲಿ ನಿರ್ವಹಿಸಬೇಕು. ಜಿಲ್ಲಾ ಸರ್ಜನ್ ಪರಿಶೀಲಿಸಲು ಮುಕ್ತವಾಗಿರಿಸಬೇಕು. ದಾಖಲೆಗಳನ್ನು ಪಡೆಯಲು ರೋಗಿ ಅಥವಾ ಅವನ ಕುಟುಂಬದ ಸದಸ್ಯರಿಗೆ ಹಕ್ಕಿದೆ. ಡಿಜಿಟಲ್ ರೂಪದಲ್ಲಿ ವೈದಕೀಯ ದಾಖಲೆಗಳನ್ನು ಶೇಖರಿಸಿಡಲು ಸಂಗ್ರಹಣ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಟಿ. ವೆಂಕಟೇಶ್ ತಿಳಿಸಿದರು.
ಅಗ್ನಿ ಸುರಕ್ಷತೆ: ವಾಣಿಜ್ಯ ಸಂಕೀರ್ಣ ಕಟ್ಟಡಗಳಿಗೆ ಸಂಬಂಧಿಸಿದ ಮಾಲೀಕರು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಎಂದು ಡಿಸಿ ತಿಳಿಸಿ ದರು.
ಈ ಪ್ರಮಾಣ ಪತ್ರದ ನಂತರವೇ ನಗರಸಭೆ, ಸ್ಥಳೀಯ ಸಂಸ್ಥೆಗಳು ಇ-ಸ್ವತ್ತು ವಿತರಿಸಬೇಕು. ಇದು ಆಸ್ಪತ್ರೆ ಕಟ್ಟಡಗಳಿಗೂ ಅನ್ವಯಿಸುತ್ತದೆ ಎಂದರು.
ಜಿಲ್ಲಾ ಐಎಂಎ ಅಧ್ಯಕ್ಷ ಡಾ. ಪಾಲಕ್ಷಯ್ಯ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಎನ್. ಕಾಶಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ ನಾಗಸಮುದ್ರ, ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಖಾ, ವಕೀಲ ಉಮೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಇತರರು ಇದ್ದರು.