

ಮೈಸೂರು: ಮೈಸೂರು ತಾಲೂಕಿನ ಕಸಬಾ ಹೋಬಳಿ ಶಾದನಳ್ಳಿ ಗ್ರಾಮದಲ್ಲಿ ನಕಲಿ ರಸಗೊಬ್ಬರ ತಯಾರು ಮಾಡುತ್ತಿರುವ ಘಟಕದ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿ ನಕಲಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿ ಅಡುಗೆ ಉಪ್ಪು (ತೋಟಗಾರಿಕೆ ಉಪ್ಪು) ಮತ್ತು ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಎಂಒಪಿ (ಮ್ಯುರಿಯೇಟ್ ಪೊಟಾಷ್) ರಸಗೊಬ್ಬರ ಎಂದು ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ಹೆಸರಾಂತ ಕಂಪನಿಗಳ ಬ್ರಾೃಂಡ್ ಮುದ್ರೆಯ ಗೊಬ್ಬರ ಚೀಲಗಳಲ್ಲಿ ತುಂಬಿಸಿ ರೈತರಿಗೆ ನಕಲಿ ಗೊಬ್ಬರ ಮಾರಾಟ ಮಾಡಿ ಮೋಸ ಮಾಡಲಾಗುತ್ತಿತ್ತು.
ಮೈಸೂರು ಕಸಬಾ ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಪತ್ತೆ ಮಾಡಿ, ದಾಳಿ ಮಾಡಿದ್ದು, ಕಾರ್ಖಾನೆ ಮಾಲೀಕ ಮಹೇಶ್ ಎಂಬುವರ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಪರಾರಿಯಾಗಿದ್ದಾನೆ.
ಉಪ್ಪು, ರೆಡ್‌ಆಕ್ಸೈಡ್ ಮಿಶ್ರಣವನ್ನು ಎಂಒಪಿ ಸೇರಿದಂತೆ ವಿವಿಧ ಕಂಪನಿಗಳ ಚೀಲಕ್ಕೆ ತುಂಬಿಸಿ, 50 ಕೆ.ಜಿ. ತೂಕದ ಚೀಲಗಳನ್ನಾಗಿ ಮಾರಾಟ ಮಾಡಲಾಗುತ್ತಿತ್ತು. ಘಟಕದಲ್ಲಿದ್ದ 5 ಚೀಲ ನಕಲಿ ಗೊಬ್ಬರ, ತೂಕ ಮಾಡುವ ಯಂತ್ರ, ಚೀಲಕ್ಕೆ ಹೊಲಿಗೆ ಹಾಕುವ ಯಂತ್ರ, ಎಂಒಪಿ ಮುದ್ರಿಸಿದ ಚೀಲಗಳು, ರೆಡ್ ಆಕ್ಸೈಡ್ ರಾಸಾಯನಿಕ, 100 ಚೀಲ ಉಪ್ಪು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಕಲಿ ಗೊಬ್ಬರ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಎಂದು ಕೃಷಿ ಅಧಿಕಾರಿ ಕಾರ್ತಿಕ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ವ್ಯಕ್ತಿಯೊಬ್ಬರ ಜಾಗವನ್ನು ಬಾಡಿಗೆಗೆ ಪಡೆದು ಆರೋಪಿ ಅಡಕೆ ಹಾಳೆಯಿಂದ ತಟ್ಟೆ ಸಾಮಗ್ರಿ ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದರು. ಈತ ಕಳೆದ ಜುಲೈಯಲ್ಲಿ ಮೈಸೂರು ವಿಮಾನ ನಿಲ್ದಾಣ ರಸ್ತೆಯ ಮಂಡಕಳ್ಳಿ ಬಳಿ ಇದೇ ರೀತಿಯ ನಕಲಿ ರಸಗೊಬ್ಬರ ತಯಾರಿಸಿ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸರ ಕೈಗೆ ಸಿಕ್ಕಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಉಪನಿರ್ದೇಶಕ ರಾಜು, ಸಹಾಯಕ ಕೃಷಿ ನಿರ್ದೇಶಕರಾದ ಕೃಷ್ಣ, ಎಚ್.ಬಿ. ಮಧುಲತಾ, ಕೃಷಿ ಅಧಿಕಾರಿಗಳಾದ ಪಿ.ಎನ್. ಜೀವನ್, ಸಿ.ಎಂ. ಕಾರ್ತಿಕ್, ಮೇಟಗಳ್ಳಿ ಠಾಣೆಯ ಪಿಎಸ್‌ಐ ಕಿರಣ್, ಸಿಬ್ಬಂದಿ ಇದ್ದರು.