ನಕಲಿ ಬಿಲ್ ಸೃಷ್ಟಿಸಿ ಕೆಎಸ್‌ಐಸಿಗೆ 18.75 ಲಕ್ಷ ರೂ. ವಂಚನೆ: 7 ಜನರ ವಿರುದ್ಧ ಎಫ್‌ಐಆರ್

FIR-2
Published on

ಮೈಸೂರು: ನಕಲಿ ಬಿಲ್ ಸೃಷ್ಟಿಸಿ ಕರ್ನಾಟಕ ರೇಷ್ಮೆ ಉದ್ಯಮ ನಿಗಮಕ್ಕೆ(ಕೆಎಸ್‌ಐಸಿ) 18.75 ಲಕ್ಷ ರೂ. ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಂಸ್ಥೆಯ 9 ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜಯಲಕ್ಷ್ಮೀಪುರಂ ಕಾಳಿದಾಸ ರಸ್ತೆಯಲ್ಲಿನ ಕೆಎಸ್‌ಐಸಿ ಮಾರಾಟ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಳಿಗೆಯ ಮಾಜಿ ಉಸ್ತುವಾರಿ ಯಶವಂತ್ ಕುಮಾರ್, ಸೇಲ್ಸ್ ಸಹಾಯಕರಾದ ರೇವಂತ್‌ಕುಮಾರ್, ಫಾತಿಮಾ, ಎಂ.ವಿ.ಶೋಭಾ, ಅಮ್ಜದ್ ಅಹಮ್ಮದ್, ಮೊಹಮ್ಮದ್ ಅಮೀರ್, ಅನು ಸೇರಿದಂತೆ 7 ಜನರ ವಿರುದ್ಧ ಕೆಎಸ್‌ಐಸಿಯ ಜನರಲ್ ಮ್ಯಾನೇಜರ್ ಎಸ್.ಜಿ.ಸಿದ್ದಲಿಂಗಪ್ರಸಾದ್ ದೂರು ನೀಡಿದ್ದಾರೆ.

2024ರ ಸೆಪ್ಟಂಬರ್ 2ರಿಂದ 2025ರ ಮೇ 31ರ ವರೆಗೆ ಮಾರಾಟ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯಶವಂತ್ ಕುಮಾರ್ ಮತ್ತು ಇತರ ಸಿಬ್ಬಂದಿ, ನಕಲಿ ರಸೀದಿ ಸೃಷ್ಟಿಸಿಕೊಂಡಿದ್ದು, ಗ್ರಾಹಕರಿಗೆ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಸೀರೆಗಳನ್ನು ಮಾರಾಟ ಮಾಡಿ, ಕಂತಿನ ಹಣವನ್ನು ಸಂಸ್ಥೆಯ ಖಾತೆಗೆ ಜಮೆ ಮಾಡಿಲ್ಲ.

ಈ ಮೂಲಕ 18.75 ಲಕ್ಷ ರೂ.ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net