ನಕಲಿ ಬಿತ್ತನೆ ಬೀಜ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ

07-kolar-1
ಕೋಲಾರ ತಾಲೂಕು ಮುದುವತ್ತಿಯ ರೈತ ಶ್ರೀರಾಮಪ್ಪ ಎಲೆಕೋಸು ತೋಟಕ್ಕೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಭೇಟಿ ನೀಡಿದ್ದು, ರೈತಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ನಾರಾಯಣಸ್ವಾಮಿ ಇತರರು ಇದ್ದರು.
Published on

ಕೋಲಾರ : ನಕಲಿ ಬಿತ್ತನೆ ಬೀಜ, ಕೀಟನಾಶಕ, ಮಾರಾಟ ಮಾಡುವ ಕಂಪನಿ, ಸಸಿ ವಿತರಣೆ ಮಾಡಿರುವ ನರ್ಸರಿ ವಿರುದ್ಧ ಕ್ರಮ ಕೈಗೊಂಡು, ನಷ್ಟವಾಗಿರುವ ರೈತರಿಗೆ ರೈತರಿಗೆ ಪ್ರತಿ ಎಕರೆಗೆ ೧೦ ಲಕ್ಷ ರೂ. ಪರಿಹಾರ ನೀಡುವಂತೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಡಳಿತವನ್ನು ಒತ್ತಾಯ ಮಾಡಿದರು.
ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಮುದುವತ್ತಿಯ ರೈತ ಶ್ರೀರಾಮಪ್ಪನ ಎಲೆಕೋಸು ತೋಟಕ್ಕೆ ಬೇಟಿ ನೀಡಿ ಮಾತನಾಡಿ, ರೈತರು ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ರಾತ್ರಿ, ಹಗಲು, ಬಿಸಲು, ಮಳೆ, ಚಳಿ ಎನ್ನದೆ ಬೆವರು ಸುರಿಸಿ ಬೆಳೆ ಮಾಡಿದರೆ ಕೋಸು ಸೇರಿದಂತೆ ಇತರ ಬೆಳೆಗಳು ಫಸಲು ಕೊಡುತ್ತಿಲ್ಲ. ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಹಾವಳಿಯಿಂದ ಕೈಗೆ ಬಂದ ಬೆಳೆ ಸಂಪೂರ್ಣವಾಗಿ ಕೈ ಸುಡುತ್ತಿದ್ದು, ಕ್ರಮ ಕೈಗೊಳ್ಳಬೇಕಾದ ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ದೂರಿದರು.
ಮುದುವತ್ತಿಯ ಶ್ರೀರಾಮಪ್ಪ ೪ ಎಕರೆಯಲ್ಲಿ ಎಲೆ ಕೋಸು ಬೆಳೆದಿದ್ದು ಗೆಡ್ಡೆ ಬಾರದೆ ಕೊಳೆತುಹೋಗಿದೆ. ಇದರಿಂದಾಗಿ ಈತನ ಬದುಕು ಬೀದಿಗೆ ಬೀಳುವಂತಾಗಿದೆ. ಉಸ್ತುವಾರಿ ಸಚಿವ ಬೈರತಿ ಸುರೇಶ್ ಅನಧಿಕೃತ ನರ್ಸರಿ, ಕಳಪೆ ಬಿತ್ತನೆ ಬೀಜ ಸರಬರಾಜು ಮಾಡಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿ ತಿಂಗಳು ಕಳೆದರೂ ಅದು ಕೆಡಿಪಿ ಸಭೆಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ರೈತ ಶ್ರೀರಾಮಪ್ಪ ಮಾತನಾಡಿ, ಚಿಕ್ಕಹಸಾಳದ ಗೋವಿಂದಪ್ಪ ಎಂಬುವರ ನರ್ಸರಿಯಲ್ಲಿ ಎಲೆಕೋಸು ಸಸಿಗಳನ್ನು ತಂದು ನಾಟಿ ಮಾಡಿದ್ದು, ಇನ್ನೇನು ಪಸಲು ಕೈಗೆ ಬರುವ ಸಮಯದಲ್ಲಿ ಸಂಪೂರ್ಣವಾಗಿ ಗಡ್ಡೆಗಳು ಕೊಳ್ಳೆಯುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೆ ದೂರನ್ನು ಸಹ ಕೈಗೆ ತೆಗೆದುಕೊಳ್ಳದೇ ಟಪಾಲ್‌ನಲ್ಲಿ ಕೊಟ್ಟು ಹೋಗಿ, ಪರಿಶೀಲಿಸುತ್ತೇವೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ನಾರಾಯಣಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net