

ಬಸವಕಲ್ಯಾಣ: ನಗರದಲ್ಲಿ ಹೆಚ್ಚಾಗಿರುವ ನಕಲಿ ಪತ್ರಕರ್ತರ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಒತ್ತಾಯಿಸಿದೆ. ಈ ಸಂಬಂಧ ಮಿನಿ ವಿಧಾನಸೌಧಕ್ಕೆ ತೆರಳಿದ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಪ್ರಮುಖರ ನಿಯೋಗದಿಂದ ತಹಸೀಲ್ದಾರ್ ಶಾಂತಗೌಡ ಬಿರಾದಾರಗೆ ಬರೆದ ಮನವಿ ಪತ್ರ ಗ್ರೇಡ್-೨ ತಹಸೀಲ್ದಾರ್ ಪಲ್ಲವಿ ಬೆಳಕೇರೆ ಅವರಿಗೆ ಸಲ್ಲಿಸಲಾಯಿತು.
ನಗರದಲ್ಲಿ ಕಳೆದ ಕೆಲ ತಿಂಗಳಿಂದ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಅನಧಿಕೃತ ಸುದ್ದಿವಾಹಿನಿಗಳ ಲೋಗೋ ಹಿಡಿದು ಪತ್ರಕರ್ತರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಸೇರಿ ವಿವಿಧ ಸಂಸ್ಥೆಗಳ ಆಡಳಿತ ಮಂಡಳಿಯವರಿಗೆ ಹಣಕ್ಕಾಗಿ ಬೇಡಿಕೆ ಇಡುವ ಮೂಲಕ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮನವರಿಕೆ ಮಾಡಿದರು.
ಈ ಕುರಿತು ಈಗಾಗಲೇ ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಓಗಳು ಕಾರ್ಯನಿರತ ಪತ್ರಕರ್ತರ ಸಂಘದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ತಕ್ಷಣ ತಾಲೂಕು ಆಡಳಿತ ಎಚ್ಚೆತ್ತು ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕಿದೆ. ನಗರದಲ್ಲಿ ಯಾವುದೇ ಅಪರಿಚಿತ ವ್ಯಕ್ತಿ ಪತ್ರಕರ್ತನೆಂದು ಹೇಳಿದ ಕೂಡಲೇ ಆತನ ಸಂಸ್ಥೆ ಹಾಗೂ ಪತ್ರಿಕೆಗೆ ಸಂಬAಧಿಸಿದAತೆ ದಾಖಲೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಪತ್ರಕರ್ತರಲ್ಲದವರು ತಮ್ಮ ವಾಹನಗಳ ಮೇಲೆ ಪ್ರೇಸ್ ಎಂದು ಬರೆದುಕೊಂಡು ಓಡಾಡುತ್ತಿದ್ದು, ಅಂಥ ವಾಹನಗಳನ್ನು ಪೊಲೀಸ್ ಇಲಾಖೆಯಿಂದ ವಶಕ್ಕೆ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ಸಿಪಿಐ ಅಲಿಸಾಬ್ ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಉಪಾಧ್ಯಕ್ಷ ನೈಮೋದ್ದಿನ್ ಚಾಬುಕ್ ಸವಾರ್, ಪ್ರಹ್ಲಾದ್ ಡಿಕೆ, ಕಾರ್ಯದರ್ಶಿ ಶಿವಪುತ್ರ ಪಾಟೀಲ್, ಕೋಶಾಧ್ಯಕ್ಷ ಪ್ರದೀಪ್ ವಿಸಾಜಿ, ಗೌರವ ಸಲಹೆಗಾರ ವೀರಶೆಟ್ಟಿ ಮಲಶೆಟ್ಟಿ, ಪತ್ರಕರ್ತರಾದ ರಾಜೇಂದ್ರ ಗೋಖಲೆ, ಕಲ್ಯಾಣರಾವ ಮದರಗಾಂವಕರ್, ಜುಬೇರ ನವಾಜ್‌ಬಾಯಿ, ಧನರಾಜ ರಾಜೋಳೆ ಇತರರಿದ್ದರು.