ನಕಲಿ ಜ್ಯೋತಿಷಿಗಳು ಪೊಲೀಸರ ವಶಕ್ಕೆ

21 rtl 01
Published on

ರಟ್ಟಿಹಳ್ಳಿ: ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ಹೋಗಿಸುತ್ತೇವೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಜ್ಯೋತಿಷಿಗಳನ್ನು ಗ್ರಾಮಸ್ಥರು ಹಿಡಿದು ಕೂಡಿಹಾಕಿದ ಘಟನೆ ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ರಾಯದುರ್ಗದಿಂದ ಬಂದಿರುವುದಾಗಿ ಹೇಳಿಕೊಂಡ ಜ್ಯೋತಿಷಿಗಳು, ‘ದುಷ್ಟ ಶಕ್ತಿಗಳು ನಿಮ್ಮನ್ನು ಬಾಧಿಸುತ್ತಿವೆ. ನಮ್ಮಬಳಿ ಮಂತ್ರದಿಂದ ತಯಾರಿಸಿರುವ ಆಂಜನೇಯ ಭಾವಚಿತ್ರವನ್ನು ಕೊಂಡುಕೊಳ್ಳಿ, ಇದಕ್ಕೆ ಮೂರುಸಾವಿರ ರೂ. ನೀಡಿ’ ಎಂದು ಜನರನ್ನು ಒತ್ತಾಯಿಸುತ್ತಿದ್ದರು. ಇದನ್ನು ಗಮನಿಸಿದ ಕೆಲ ಗ್ರಾಮಸ್ಥರು ಅಕ್ಕಪಕ್ಕದ ಹಳ್ಳಿಗಳಿಗೆ ಮಾಹಿತಿ ತಿಳಿಸಿ ಅಲ್ಲಿಂದ ಜನರನ್ನು ಕರೆಯಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಅದೇ ಗ್ರಾಮದ ಕರಿಬಸಯ್ಯ ಎಂಬುವರು ಕಳೆದ 10 ದಿನಗಳ ಹಿಂದಿನಿಂದ ಇದೇ ರೀತಿ ವೇಷ ಧರಿಸಿದ 8-10 ಜನ ಕಾರ್ಯಾಚರಿಸುತ್ತಿದ್ದು ಇವರಿಂದ ನಾನು ಮೋಸ ಹೋಗಿದ್ದಾಗಿತಿಳಿಸಿದರು. ಆಗ ಗ್ರಾಮಸ್ಥರು ಜ್ಯೋತಿಷಿಗಳನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಜ್ಯೋತಿಷಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಕಲಿ ಜ್ಯೋತಿಷಿಗಳನ್ನು ವಿಚಾರಣೆ ಮಾಡಲಾಗುವುದು, ಇವರ ಬಗ್ಗೆ ಸೂಕ್ತ ಮಾಹಿತಿ ದೊರೆತಿಲ್ಲ, ಜನರು ಸಹ ಇಂಥ ನಕಲಿ ಜ್ಯೋತಿಷಗಳನ್ನು ನಂಬಬಾರದು. - ಎ.ಆರ್.ಮಣಕೂರ, ಪಿ.ಎಸ್.ಐ. ಹಿರೇಕೆರೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net