ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ

bkt-30-12.
ಬಾಗಲಕೋಟೆ ಪ್ರಸ್ ಕ್ಲಬ್ ನಲ್ಲಿ ಶುಕ್ರವಾರ ಎಸ್ಟಿ ಸಮಾಜದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ವಿರೋಧಿಸಿ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಮಾತನಾಡಿದರು. ಮುಖಂಡರಾದ ರಾಜು ನಾಯ್ಕರ್, ಶಂಭುಗೌಡ ಪಾಟೀಲ ಮತ್ತಿತರರು ಇದ್ದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸಾವಿರಾರು ಜನರು ಅನರ್ಹರು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಉದ್ಯೋಗದಲ್ಲಿ ಬಡ್ತಿ, ವಿದ್ಯಾಭ್ಯಾಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಸಮಾಜದ ಮುಖಂಡರಿಗೆ ಯಾವುದೇ ಸ್ಪಂದನೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾ ವಾಲ್ಮೀಕಿ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ದ್ಯಾಮಣ್ಣ ಗಾಳಿ, ಮುಖಂಡ ರಾಜು ನಾಯ್ಕರ್, ಪ್ರಕಾಶ ನಾಯ್ಕರ್ ಸೇರಿ ಹಲವರು ಜಂಟಿ ಸುದ್ದಿಗೋಷ್ಠಿ ನಡೆಸಿ, ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ವಿರುದ್ಧ ಸೆಪ್ಟಂಬರ್ ೨ ರಿಂದ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಅಂದಾಜು ೪ ಸಾವಿರಕ್ಕೂ ಹೆಚ್ಚು ಜನರು ಹೀಗೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆದುಕೊಂಡು, ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸದ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ವಿವಿಧ ಹುದ್ದೆಗಳಿಗೆ ಬಡ್ತಿ ಪಡೆದಿರುವ ಕೆಲವರು ವಾಲ್ಮೀಕಿ ಸಮುದಾಯದವರು ಅಲ್ಲದಿದ್ದರೂ ಪ್ರವರ್ಗ ೧ರಲ್ಲಿ ಸೌಲಭ್ಯ ಪಡೆದುಕೊಂಡು ಇದೀಗ ಎಸ್ಟಿ ಪ್ರಮಾಣ ಪತ್ರ ಪಡೆದು ಬಡ್ತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಎರಡು ತಿಂಗಳು ಮೊದಲೇ ಜಿಲ್ಲಾಽಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ನಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ವತಃ ಜಿಲ್ಲಾಧಿಕಾರಿಗಳೆ ಸಿಂಧುತ್ವ ನೀಡಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು.

ಪರಿಶಿಷ್ಟ ಪಂಗಡದಲ್ಲಿ ಬರುವ ನಾಯಕ, ನಾಯ್ಕಡ, ಚೋಳ ನಾಯಕ, ಕಾಪಾಡಿಯಾ ನಾಯಕ, ಮೋಟ ನಾಯಕ, ನಾನಾ ನಾಯಕ, ನಾಯಕ ಬೇಡ, ಬೇಡರ, ಮತ್ತು ವಾಲ್ಮೀಕಿ ಜಾತಿಗಳ ಜೊತೆಗೆ ಅದೇ ಜಾತಿಯ ಪರ್ಯಾಯ ಪದವಾದ ಪರಿವಾರ, ತಳವಾರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಸೌಲಭ್ಯ ವಿತರಿಸಬಹುದಾಗಿದೆ ಎಂದು ಕುಲಶಾಸ್ತ್ರೀಯ ಅಧ್ಯಯನ ಮುಖಾಂತರ ಕೇಂದ್ರ ಸರ್ಕಾರ ಗೆಜೆಟ್ ನೋಟಿಪಿಕೇಶನ್ ಹೊರಡಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಮೊದಲು ಪ್ರವರ್ಗ ೧ ರಲ್ಲಿ ಇದ್ದ ಹಲವು ಜಾತಿಗಳ ಜನರು ನಾಯಕ, ನಾಯ್ಕಡ, ತಳವಾರ, ಪರಿವಾರ ಎಂದು ಸುಳ್ಳು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ನೈಜವಾದ ಪರಿಶಿಷ್ಟ ಪಂಗಡದವರಿಗೆ ಮೋಸ ಮಾಡಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಈ ಬಗ್ಗೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಇರುವ ನಮ್ಮ ಸಮುದಾಯ ಯಾವೊಬ್ಬ ಶಾಸಕ, ಸಚಿವರು ಧ್ವನಿ ಎತ್ತಿಲ್ಲ. ಇದು ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ. ಇದನ್ನು ಸಮಾಜದ ಜನರು ಸೇರಿಕೊಂಡು ಜನಧ್ವನಿ ಮೊಳಗಿಸುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಸಮಾಜದ ಮುಖಂಡರಾದ ಶಂಭುಗೌಡ ಪಾಟೀಲ, ಭೀಮಸಿ ತಳವಾರ, ಮಹಾದೇವ ನಾಯಕ, ನಿಂಗಪ್ಪ ಕ್ಯಾದಿಗೇರಿ, ಮಹಾದೇವ ನಾಯಕ, ಹೇಮಂತ ಚೂರಿ, ಪ್ರಲ್ಹಾದ ಸೊನ್ನದ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net