ನಕಲಿ ಗಾಂಧಿ ಪರಿವಾರಕ್ಕೆ ಗಂಭೀರತೆ ಇಲ್ಲ

Published on

ಹುಬ್ಬಳ್ಳಿ: ನಕಲಿ ಗಾಂಧಿ ಪರಿವಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಅಪಹಾಸ್ಯ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರತಿದಿನ ಲಕ್ಷ ಕೋಟಿಗಳ ಹಗರಣದ ಆರೋಪವಿತ್ತು. ಹಾಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ, ಬಿಜೆಪಿ ಸರ್ಕಾರ 40 ಪರ್ಸೆಟ್ ಸರ್ಕಾರ ಎಂದಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್​ನವರಿಗೆ ಗಂಭೀರತೆಯೂ ಇಲ್ಲ ಎಂದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಎಂದುಕೊಂಡಿದ್ದಾರೆ. ಈ ನಕಲಿ ಗಾಂಧಿ ಪರಿವಾರ ಹಾಗೂ ಪಟಾಲಂ ಬಗ್ಗೆ ಜನರಿಗೆ ಸ್ಪಷ್ಟವಾಗಿ ಗೊತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಅವರು ಮೊದಲು ಕಾಂಗ್ರೆಸ್ ಜೋಡೋ ಮಾಡಲಿ ನಂತರ ಭಾರತ್ ಜೋಡೋ ಮಾಡಲಿ ಎಂದು ಕುಟುಕಿದರು.

ಶತಮಾನ ಕಂಡು ಕೇಳರಿಯದಂಥ ಕೋವಿಡ್ ನಾವು ಎದುರಿಸಿದ್ದೇವೆ. ಯಾರ ಸಮಯದಲ್ಲಿ ದೇಶದ ಸಾಲ ಜಾಸ್ತಿಯಾಗಿತ್ತು ಎಂಬುದಕ್ಕೆ ಅಂಕಿ-ಸಂಖ್ಯೆ ಇದೆ. ಇಡೀ ಜಗತ್ತಿನಲ್ಲೇ ಆರ್ಥಿಕತೆ ವಿಚಾರದಲ್ಲಿ ಭಾರತ ಐದನೇ ಸ್ಥಾನ ಗಿಟ್ಟಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರಿಯಬೇಕು. ರಾಹುಲ್ ಗಾಂಧಿಗೆ ಚೀಟಿ ಬರೆದು ಕೊಡುತ್ತಾರೆ, ಅದನ್ನೇ ಓದುತ್ತಾರೆ.

ಭಾಷಣ ಮುಗಿದ ಮೇಲೆ ಏನು ಮಾತನಾಡಿದ್ದಾರೆ ಅಂತ ಅವರಿಗೇ ಗೊತ್ತಿರುವುದಿಲ್ಲ ಎಂದು ವ್ಯಂಗ್ಯವಾಡಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net