ನಕಲಿ ಅಂಕಪಟ್ಟಿ ಜಾಲ ಪತ್ತೆ

1007Klb Crime-1
Published on

ಕಲಬುರಗಿ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ರೂಪಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬಯಲಿಗೆಳೆದಿರುವ ಪೊಲೀಸರು, ರೂವಾರಿ ಆರೋಪಿಯನ್ನು ಬಂಧಿಸಿದ್ದಾರೆ.
ಮಹ್ಮದ್ ಖಾನ್ ಯುಸೂಫ್ಖಾನ್ (37) ಎಂಬಾತನನ್ನು ಬಂಧಿಸಿ 2.20 ಲಕ್ಷ ರೂ. ನಗದು, ಲ್ಯಾಪ್ಟಾಪ್, ನಕಲಿ ಅಂಕಪಟ್ಟಿ ಇತರ ದಾಖಲೆಗಳು, ಬಿಲ್ ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ್ ಮತ್ತು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ.
ಕಲಬುರಗಿ ತಾರಫೈಲ್ ಗೌಸ್ ನಗರದ ನಿವಾಸಿಯಾಗಿರುವ ಈತ, ಏಷಿಯನ್ ಮಾಲ್ ಮೊದಲ ಮಹಡಿಯಲ್ಲಿ ಐ4ಯು ಗ್ಲಾಮ್ ಚಾಯಿಸ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಅಲ್ಲೇ ತನ್ನ ನಕಲಿ ಮಾರ್ಕ್ಸ ಕಾರ್ಡ ದಂಧೆ ನಡೆಸುತ್ತಿದ್ದ. ವಿವಿಧ ವಿವಿಗಳ ಸೈಟ್ಗಳನ್ನು ಇಂಟರ್ನೆಟ್ನಲ್ಲಿ ಪರಿಶೀಲಿಸಿ ಅದಕ್ಕೆ ತಕ್ಕಂತೆ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿಇ, ಬಿ.ಟೆಕ್, ಎಂಬಿಎ, ಎಂಸಿಎ, ಎಂಟೆಕ್ ಮೊದಲಾದ ಪ್ರಮಾಣಪತ್ರಗಳನ್ನು ನೀಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಕಮೀಷನರ್, ಡಿಸಿಪಿ ಹಾಗೂ ಎಸಿಪಿ ವಿಜಯಕುಮಾರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಎಲ್.ಎಚ್. ಗೌಂಡಿ, ಸಂಜೀವಕುಮಾರ ಕುಂಬಾರಗೇರಿ ಮತ್ತು ಸಿಬ್ಬಂದಿ ಗುರುವಾರ ರಾತ್ರಿ ದಾಳಿ ನಡೆಸಿ ಜಾಲ ಬಯಲಿಗೆಳೆದಿದ್ದಾರೆ.
ಮಹ್ಮದ್ ಖಾನ್ ತನ್ನ ಬಳಿ ಬಂದವರಿಗೆ ಯಾವುದೇ ಶಿಕ್ಷಣ ನೀಡದೆ 30-45 ದಿನಗಳಲ್ಲಿ ಪ್ರಮಾಣಪತ್ರ ನೀಡುವುದಾಗಿ ನಂಬಿಸುತ್ತಿದ್ದ. ಸೇಂಟ್ ಅಲೋಷಿಯಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರಿಂಗ್, ಸಾಂಗೈ ಅಂತಾರಾಷ್ಟ್ರೀಯ ವಿವಿ, ಹಿಮಾಲಯನ್ ಯೂನಿವಸರ್ಿಟಿ, ಸ್ವಾಮಿ ವಿವೇಕಾನಂದ ಹೀಗೆ ವಿವಿಧ ವಿವಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತರಿಸಿ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಬಿಇ, ಬಿಟೆಕ್ ಅಂಕಪಟ್ಟಿಗೆ 3 ಲಕ್ಷ ರೂ., ಎಂಬಿಎಗೆ 1.5 ಲಕ್ಷ, ಎಂಸಿಎಗೆ 90 ಸಾವಿರ, ಬಿಕಾಂ, ಬಿಎಸ್ಸಿ 50-60 ಸಾವಿರ, ಎಸ್ಸೆಸ್ಸೆಲ್ಸಿ, ಪಿಯುಸಿ ಇತರ ಅಂಕಪಟ್ಟಿಗಳಿಗೆ 30-40 ಸಾವಿರ ರೂ. ಪಡೆದು ನೀಡುತ್ತಿದ್ದ. ಈತನ ಬಳಿ ನಕಲಿ ಅಂಕಪಟ್ಟಿ ಪಡೆದವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿದೇಶಕ್ಕೆ ಹೋಗಲು ಅಟೆಸ್ಟೆಡ್ ಸಹ ಮಾಡಿಸಿಕೊಡುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇನ್ನಷ್ಟು ತನಿಖೆ ನಡೆದಿದ್ದು, ಬಂಧಿತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಆಯುಕ್ತಾಲಯದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net