ನಕಲು ಮುಕ್ತ ಪರೀಕ್ಷೆಗೆ ಪ್ರೋತ್ಸಾಹಿಸಿ

30 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಸತತವಾಗಿ ಅಭ್ಯಾಸ ಮಾಡಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಗಳಿಸಬೇಕು. ನಕಲು ಮಾಡುವುದು ತಪ್ಪು. ಈ ಕುರಿತು ಪಾಲಕರಿಗೂ ಜಾಗೃತಿ ಅಗತ್ಯ. ನಕಲು ಮುಕ್ತ ಪರೀಕ್ಷೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಮುಖ್ಯೋಪಾಧ್ಯಾಯ ಜಗದೀಶ ಕರಿಯಮ್ಮನವರ ಹೇಳಿದರು.
ತಾಲೂಕಿನ ಮನಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಾಯಂದಿರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಅತ್ಯಂತ ಸುವ್ಯವಸ್ಥಿತವಾಗಿ, ನಕಲಿಗೆ ಅವಕಾಶ ನೀಡದೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ನಕಲು ಮಾಡಿ ಪಾಸಾಗುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವಲ್ಲ. ನಕಲು ಮಾಡಿ ಪಾಸಾದವರು ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆತ್ಮಸಾಕ್ಷಿ ಒಪ್ಪುವಂತೆ ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಬೇಕು. ಪಾಲಕರು ಸಹ ನಕಲಿಗೆ ಪ್ರೋತ್ಸಾಹಿಸದೆ ಮಕ್ಕಳಿಗೆ ಈಗಿನಿಂದಲೇ ಪ್ರಾಮಾಣಿಕವಾಗಿ ಓದಿ ಬರೆಯುವಂತೆ ಪ್ರೇರೇಪಿಸಬೇಕು ಎಂದರು.
ತಾಯಂದಿರು ಮಕ್ಕಳ ವರ್ತನೆ ಮೇಲೆ ಸದಾ ಗಮನವಿಟ್ಟು ಅವರ ಶಿಕ್ಷಣದ ಬಗ್ಗೆ ಸದಾ ಕಾಳಜಿ ವಹಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಸದಾ ಶಿಕ್ಷಕರ ಜತೆಗೆ ಚರ್ಚಿಸಬೇಕು. ಮನೆಯಲ್ಲಿ ಮಕ್ಕಳಿಗೆ ಉತ್ತಮ ಗುಣ, ಸಂಸ್ಕಾರ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಶಿಕ್ಷಕರಾದ ಪ್ರಮೋದ ವಾದಿರಾಜ, ಸಿ.ಸಿ. ಹಿರೇಮಠ, ಎನ್.ಕೆ. ಭಾಗವಾನ, ಮಂಜುನಾಥ ಕವಳಿ, ಇತರರು ಇದ್ದರು. ರಂಗನಾಥ ವಾಲ್ಮೀಕಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net