

ವಿಜಯವಾಣಿ ಸುದ್ದಿಜಾಲ ಧಾರವಾಡ
ರಸಾಯನಶಾಸ್ತ್ರ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರವಾಡದ ಕೀರ್ತಿ ಹೆಚ್ಚಿಸದ ಸಾಧನೆಗೆ ವಿಜ್ಞಾನಿ ಡಾ. ಎಸ್.ಟಿ. ನಂದಿಬೇವೂರ ಪಾತ್ರ, ಕೊಡುಗೆ ಅಪಾರ ಎಂದು ಸಾಯಿ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕಿ ಡಾ. ವೀಣಾ ಬಿರಾದಾರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಶರಣಪ್ಪ ತೋಟಪ್ಪ ನಂದಿಬೇವೂರ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಯುವ ವಿಜ್ಞಾನಿ ಪ್ರಶಸ್ತಿ-2023 ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಂಧೂ ನಾಗರಿಕತೆ ಕಾಲದಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ರಸಾಯನಶಾಸ್ತ್ರ ವಿಭಾಗದಲ್ಲಿ ನಮ್ಮ ದೇಶದ ಕೊಡುಗೆ ವಿಶೇಷ. ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಆರ್ಯಭಟರಂಥಹ ವಿಜ್ಞಾನಿಗಳು ದಶಮಾಂಶ, ಚರಕ ಸಂಹಿತೆ, ಶೂಶ್ರುಕ ಸಂಹಿತೆಯಂತಹ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶಿಷ್ಟ ಸಾಧನೆಯು ಗುಪ್ತರ ಕಾಲದಿಂದ ಅಬ್ದುಲ್ ಕಲಾಂವರೆಗೂ ಮರೆಯುವಂತಿಲ್ಲ ಎಂದರು.
ರಸಾಯನ ಶಾಸ್ತ್ರ ವಿಭಾಗದಲ್ಲಿ 2023ನೇ ಸಾಲಿಗೆ ಆಯ್ಕೆಯಾದ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕರುಣಾ ಕೋರಗಾಂವಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಆತ್ಮಾನಂದ ಬಾಗೋಜಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಪ್ರೊ. ಸೀತಾರಾಮಪ್ಪ ಜೆ, ಪ್ರೊ. ಅರಳಗುಪ್ಪಿ, ರಮೇಶ ಸಿದ್ಧಾಂತಿ, ರಾಜಶೇಖರ ಸಿ., ಅರ್ಚನಾ ನಂದಿಬೇವೂರ, ಪ್ರಭಾ ಪಂಡಿತ, ಶೈಲಜಾ ಜಡೆನವರ, ಸಿ.ಎಂ. ಅಂಗಡಿ, ಸಂತೋಜಿ ಬಿ.ಜಿ, ಮಂಜುನಾಥ ಮೇಗಲಮನಿ, ಡಾ. ಶಿವಕುಮಾರ ಪಾಟೀಲ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಅರುಣಾ ನಂದಿಬೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಟಿ. ನಂದಿಬೇವೂರ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಗುರು ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.