

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಂದಿಬೆಟ್ಟದ ತಪ್ಪಲಿನಲ್ಲಿ ಪರಿಸರ ಆಸಕ್ತರಿಗೆ ಹೊಸ ಜೇಡದ ಪ್ರಭೇದವೊಂದು ದೊರೆತಿದ್ದು, ಸಂಶೋಧಕರು ‘ಅರ್ಕಾವತಿ’ ಎಂದು ನಾಮಕರಣ ಮಾಡಿದ್ದಾರೆ.
ಇದರೊಂದಿಗೆ ಜಗತ್ತಿನ 50 ಸಾವಿರ ಜೇಡ ಪ್ರಭೇದಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾದಂತಾಗಿದೆ. ನದಿಗಳು ಮೂಲ ಸ್ವರೂಪ ಕಳೆದುಕೊಂಡು ಹಾಳಾಗುತ್ತಿರುವ ಮತ್ತು ಜನರ ಮನಸ್ಸಿನಿಂದ ದೂರವಾಗುತ್ತಿರುವ ಸಂದರ್ಭದಲ್ಲಿ, ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಸ್ಮರಣೆ ಮತ್ತು ಸಂರಕ್ಷಣೆಗಾಗಿ ಈ ಹೊಸ ಜೇಡ ಪ್ರಭೇದಕ್ಕೆ ‘ಅರ್ಕಾವತಿ’ ಎಂಬ ಹೆಸರಿಡಲಾಗಿದೆ.
ರಷ್ಯಾ ಮೂಲದ ಅಂತಾರಾಷ್ಟ್ರೀಯ ಜರ್ನಲ್ ಅರ್ಥೋಪೊಡೊ ಸೆಲೆಕ್ಟ್ ಪುಸ್ತಕದಲ್ಲಿ ಈ ಜೇಡದ ಲಕ್ಷಣಗಳ ಕುರಿತು ಬರಹ ಪ್ರಕಟವಾಗಿದೆ. ಸ್ಥಳೀಯ ಭಾಷೆಯಲ್ಲಿ ಹೇಳುವುದಾದರೆ ಎಗರುವ ಜೇಡಗಳ ಕುಟುಂಬಕ್ಕೆ ಸೇರಿದೆ. ಅರ್ಧ ಸೆಂಟಿ ಮೀಟರ್‌ಗೂ ಸ್ವಲ್ಪ ಕಡಿಮೆ ಅಳತೆಯ ಈ ಜೇಡ ಚುರುಕಾಗಿ ಎಗರಿ ಕ್ಷಣಾರ್ಧದಲ್ಲಿ ಮಾಯವಾಗಬಲ್ಲದು.
ಚೆನ್ನೈನ ಎಂಟಮಾಲಜಿ ಇನ್‌ಸ್ಟಿಟ್ಯೂಟ್, ಝಿಯಾಲಾಜಿಕಲ್ ಸರ್ವೇ ಆ್ ಇಂಡಿಯಾ ಹಾಗೂ ಸಾಲಿಗ ತಂಡದ ಸಹಯೋಗದಲ್ಲಿ ನಡೆಸಿದ ಸಂಶೋಧನೆಯಿಂದ ಪತ್ತೆಯಾಗಿದೆ.
ಪರಿಸರ ಆಸಕ್ತ ಲೋಹಿತ್ ವೈ ಟಿ. ಸಾಲಿಗ ತಂಡದ ಡಾ. ಅಭಿಜಿತ್ ಎಪಿಸಿ, ಚೆನ್ನೈನ ಎಂಟಮಾಲಜಿ ಇನ್‌ಸ್ಟಿಟ್ಯೂಟ್‌ನ ಡಾ. ಜಾನ್ ಕೆಲಬ್ ಹಾಗೂ ಮರಿಯಾ ಪ್ಯಾಕಿಯಂ ಈ ಪ್ರಭೇದದ ಮಾಹಿತಿ ಸಂಗ್ರಹಿಸಿದ್ದಾರೆ. ಇದು ರಷ್ಯಾದ ಜರ್ನಲ್‌ನಲ್ಲಿಯೂ ಪ್ರಕಟಗೊಂಡಿದೆ. ಈ ಲೇಖನದ ಪ್ರಕಾರ ಜೇಡದ ಪಂಗಡ(ಜಾತಿ) ಕಲಾಪ್ಸುಸ್. ಇದು ಅಪರೂಪದ್ದಾಗಿದ್ದು, ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಮ್ ದೇಶಗಳಲ್ಲಿ ಮಾತ್ರ ನೋಡಬಹುದು. ಈಗ ಸಿಕ್ಕಿರುವ ಹೊಸ ಪ್ರಭೇದವು ಜೇಡಗಳಲ್ಲಿಯೇ ಅಪರೂಪದ್ದು ಎಂದು ತಿಳಿದು ಬಂದಿದೆ.
ಮೊದಲ ಬಾರಿಗೆ ಲೋಹಿತ್ ವೈ.ಟಿ., ಅವರು ಈ ಜೇಡವನ್ನು ಪರಿಸರದಲ್ಲಿ ಕಂಡಿದ್ದರು. ನಂತರ ಜೇಡ ಹುಡುಕಾಟ ಮತ್ತು ಮಾದರಿ ಸಂಗ್ರಹಣೆಯಲ್ಲಿ ಲೋಹಿತ್ ವೈ.ಟಿ., ಚಿನ್ಮಯ್ ಸಿ.ಮಳಿಯೆ, ಆಶಾ ಎಸ್., ಜನಾರ್ದನ ಆರ್., ಚೇತನ್ ಜೆ., ಎಸ್.ಪಿ. ಹರಿಚರನ್, ನವೀನ್ ಐಯ್ಯರ್, ಸಾಕ್ಷಿ ಕೆ. ಮತ್ತು ಅಕ್ಷಯ್ ದೇಶಪಾಂಡೆ ತಂಡ ಐದು ತಿಂಗಳು ತೊಡಗಿದ್ದರು. ಈ ಸಂದರ್ಭದಲ್ಲಿ ಗಂಡು ಜೇಡ, ಹೆಣ್ಣು ಜೇಡ ಮತ್ತು ಮರಿ ಜೇಡಗಳನ್ನು ತಂಡ ಪತ್ತೆಹಚ್ಚಿತ್ತು.
ಈ ಜೇಡವನ್ನು ಸಾಮಾನ್ಯವಾಗಿ ಬೆಟ್ಟದ ತಪ್ಪಲಿನ ಎಲ್ಲ ಪ್ರದೇಶದಲ್ಲಿ ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ. ತರಗೆಲೆ ಉದುರಿದ ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು ಮತ್ತು ಒಣ ಹುಲ್ಲಿರುವ ಪ್ರದೇಶದಲ್ಲಿ ಕಂಡುಬಂದಿದೆ. ಜೇಡವು ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿ ಸುತ್ತಿದ ಎಲೆಗಳಲ್ಲಿ ಸಣ್ಣಗೂಡು ನಿರ್ಮಿಸಿ ರಾತ್ರಿ ವಿಶ್ರಮಿಸುತ್ತದೆ. ಇದು ಹಗಲು ಚಟುವಟಿಕೆಯಿಂದ ಕೂಡಿರುತ್ತದೆ. ಸುರಳಿ ಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು, ಮರಿಯಾಗುವವರೆಗೂ ಕಾಯುತ್ತದೆೆ. ಮುಂದಿನ ದಿನಗಳಲ್ಲಿ ಈ ಹೊಸ ಜೇಡದ ಕುರಿತಾದ ಇನ್ನೂ ಹೆಚ್ಚು ಸಂಶೋಧನೆಗೆ ತಂಡ ಉತ್ಸುಕವಾಗಿದೆ.
ಭಾರತದಲ್ಲಿ 2 ಸಾವಿರ ಜೇಡ ಪ್ರಭೇದಗಳಿದ್ದು, ರಾಜ್ಯದಲ್ಲಿ 500 ಪ್ರಭೇದಗಳಿವೆ. ಅಧ್ಯಯನ ಹಾಗೂ ಸಾಮಾನ್ಯರು ಜೇಡಗಳನ್ನು ಗುರುತಿಸುವಂತಾದರೆ ಇನ್ನೂ ಹೆಚ್ಚು ಪ್ರಭೇದಗಳನ್ನು ಸಂಶೋಧಿಸಿ, ಜಗತ್ತಿಗೆ ಪರಿಚಯಿಸಬಹುದು ಎನ್ನುತ್ತಾರೆ ಸಂಶೋಧಕರು.
ಜನವರಿಯಲ್ಲೆ ಈ ಪ್ರಭೇದವನ್ನು ನೋಡಿ, ಫೋಟೋಗಳನ್ನು ಸಂಬಂಧಪಟ್ಟ ಪಕ್ಷಿ, ಕೀಟಗಳ ತಜ್ಞರಿಗೆ ಕಳುಹಿಸಿದ್ದೆವು. ಅವರ ಸಲಹೆಯಂತೆ ಇದರ ಸಂಬಂಧವಾಗಿ ಚೆನ್ನೈನ ಲ್ಯಾಬೋರೇಟರಿಗೆ ಸಂಪರ್ಕ ಮಾಡಿದಾಗ ಈ ಪ್ರಭೇದದ ಗಂಡು ಹೆಣ್ಣು ಜೇಡಗಳು ಬೇಕು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ನಮ್ಮ ತಂಡ ಸಕ್ರಿಯವಾಗಿ ಚನ್ನಗಿರಿ, ನಂದಿಬೆಟ್ಟ ಸೇರಿ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಹುಡುಕಾಟ ನಡೆಸಿದಾಗ ನಂದಿಬೆಟ್ಟದ ಬುಡದಲ್ಲಿ ಫೆಬ್ರವರಿಯಲ್ಲಿ ಸಿಕ್ಕಿತ್ತು. ವಿಶ್ವದಲ್ಲೇ ಇದು ಹೊಸ ಪ್ರಭೇದ ಎಂಬ ಲಿತಾಂಶ ಬಂದ ನಂತರ ವೈಜ್ಞಾನಿಕ ಹೆಸರುಗಳಲ್ಲಿ ಕನ್ನಡ ಇಲ್ಲದ ಕಾರಣ ಈ ಪ್ರಭೇದ ಸಿಕ್ಕ ಜಾಗವಾದ ನಂದಿಬೆಟ್ಟದಲ್ಲಿ ಅರ್ಕಾವತಿಯ ಉಗಮ ಸ್ಥಾನವಾದ್ದರಿಂದ ‘ಅರ್ಕಾವತಿ’ ಎಂದು ನಾಮಕರಣ ಮಾಡಿದ್ದೇವೆ.
| ಲೋಹಿತ್ ವೈ.ಟಿ. ಪರಿಸರಾಸಕ್ತ, ತುಮಕೂರು