

ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಎರಡು ಹೊಸ ಉತ್ಪನ್ನಗಳನ್ನು ಗ್ರಾಹಕರಿಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದ ಡಾ. ವರ್ಗೀಸ್ ಕೂರಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಂದಿನಿ ಸ್ಪೆಷಲ್ ಹಾಲಿನ ಬರ್ಫಿ, ಪನ್ನೀರ್ ನಿಪ್ಪಟ್ಟು ಎಂಬ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಜೇಶ್ ಮಾತನಾಡಿ, ಒಕ್ಕೂಟದಿಂದ ಈಗಾಗಲೇ ನಾಲ್ಕು ಸಿಹಿ ತಿನಿಸುಗಳು, ಐಸ್‌ಕ್ರೀಂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಈ ಸಾಲಿಗೆ ಸ್ಪೆಷಲ್ ಹಾಲಿನ ಬರ್ಫಿ ಹಾಗೂ ಖಾರದ ತಿಂಡಿಯಾಗಿ ಪನ್ನೀರ್ ನಿಪ್ಪಟ್ಟನ್ನು ನಮ್ಮ ತಂಡ ತಯಾರಿಸಿದೆ. ಇವುಗಳನ್ನು ಭಾರತ ಮಾತ್ರವಲ್ಲದೆ, ವಿದೇಶಗಳಿಗೂ ರಫ್ತು ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.
ಸಿಹಿ ತಿನಿಸಿನಲ್ಲಿ 5 ಬಗೆಯ ಉತ್ಪನ್ನಗಳು, ಖಾರ-1, ಪನ್ನೀರ್, ಕೋವಾ, ಬೆಣ್ಣೆ, ತುಪ್ಪ, ಕ್ಷೀರ ಭಾಗ್ಯಕ್ಕೆ ಹಾಲಿನ ಪೌಡರ್ ಅನ್ನು ತಯಾರಿಸಲಾಗುತ್ತಿದೆ ಎಂದು ವಿವರಿಸಿದ ಅವರು, 2022-23ನೇ ಸಾಲಿನಲ್ಲಿ 1532 ಕೋಟಿ ರೂ. ವಹಿವಾಟು ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಎರಡು ಸಾವಿರ ಕೋಟಿ ರೂ.ಗಳ ವಹಿವಾಟಿನ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಬಿ.ಬೋರೇಗೌಡ ಮಾತನಾಡಿ, ಹಾಲಿನ ಬರ್ಫಿ ಮತ್ತು ಪನ್ನೀರ್ ನಿಪ್ಪಟ್ಟು ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ಪ್ರೋಟೀನ್ ಮುಂತಾದ ಪೌಷ್ಟಿಕಾಂಶಗಳನ್ನು ಹೊಂದಿವೆ. ಹಾಲಿನ ಬರ್ಫಿ ಒಕ್ಕೂಟದ 5ನೇ ಸಿಹಿ ತಿಂಡಿಯಾಗಿದ್ದು, ಪನ್ನೀರ್ ನಿಪ್ಪಟ್ಟು ಪ್ರಥಮ ಖಾರದ ತಿಂಡಿಯಾಗಿದೆ ಎಂದು ಹೇಳಿದರು.
ಒಕ್ಕೂಟದ ಉಪಾಧ್ಯಕ್ಷ ಎಸ್.ರಘುನಂದನ್ ಮಾತನಾಡಿದರು. ನಿರ್ದೇಶಕರಾದ ಯು.ಎಸ್.ಶಿವಕುಮಾರ್ (ಶಿವಪ್ಪ), ರೂಪಾ, ವ್ಯವಸ್ಥಾಪಕ ನಿರ್ದೇಶಕ ಮಂಜೇಶ್ , ಅಧಿಕಾರಿಗಳಾದ ಪುಷ್ಪಲತಾ, ಪ್ರಭಾಕರ್, ಗಿರೀಶ್, ಸಹಾಯಕ ವ್ಯವಸ್ಥಾಪಕರಾದ (ಮಾರುಕಟ್ಟೆ) ಸಿ.ಎನ್. ಸಾಗರ್, ಪ್ರದೀಪ್ ಹಾಜರಿದ್ದರು.