

ಹಾಸನ : ಕರ್ನಾಟಕ ರಾಜ್ಯದಲ್ಲಿ ಅಮೂಲ್ ರೈತರ ಬದುಕಿನ ಪ್ರಶ್ನೆಯಾಗಿದ್ದು, ನಂದಿನಿ ಉಳಿಸುವ ಜತೆಗೆ ರೈತರನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದದ ಮಹಾರಾಜ ಪಾರ್ಕ್ ಬಳಿಯ ಹಾಲಿನ ಡೇರಿಯಲ್ಲಿ ಸುಮಾರು 2 ಸಾವಿರ ರೂಪಾಯಿಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಖರೀದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕ ರೈತರಿದ್ದಾರೆ. ರೈತರು ಕಟ್ಟಿದ ನಂದಿನಿ ಜಾಗಕ್ಕೆ ಬಿಜೆಪಿ ಸರ್ಕಾರ ಗುಜರಾತಿನ ಅಮೂಲ್ ತರಲು ಹೊರಟಿದೆ. ಅವರಿಗೆ ಸರ್ಕಾರ ಪ್ರೋತ್ಸಾಹ ಕೊಡಲು ಹೊರಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂದಿನಿ ನಮ್ಮದು, ನಮ್ಮ ರೈತರು, ನಮ್ಮ ಹಾಲು, ನಮ್ಮ ರಕ್ಷಣೆ ಎಲ್ಲರ ಜವಾಬ್ದಾರಿ, ಗುಜರಾತ್‌ನ ಅಮೂಲ್ ಕೂಡ ರೈತರದ್ದೆ, ಆದರೆ ನಮ್ಮನ್ನು ಹಿಂದಕ್ಕೆ ತಳ್ಳಿ ಅವರು ಮುಂದೆ ಹೋಗಲು ಹೊರಟಿರುವುದು ಖಂಡನೀಯ ಎಂದರು.
ಹಾಲು ಉತ್ಪಾದಕ ರೈತರಿಗೆ ಸರ್ಕಾರ ಯಾವುದೇ ರೀತಿ ಸಹಕಾರ ನೀಡಿಲ್ಲ. ಒಂದೆಡೆ ಎಲ್ಲಾ ಬೆಲೆಗಳು ಜಾಸ್ತಿಯಾಗಿವೆ. ನಮ್ಮ ಹಾಲು ಮಾರಾಟ ಮಾಡೋಕು ಆಗ್ತಿಲ್ಲ. ಬೇರೆಯವರಿಗೆ ಸರ್ಕಾರ ಪ್ರೋತ್ಸಾಹ ಕೊಟ್ಟು ನಮ್ಮ ರೈತರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ಇಚ್ಛೆ ನಮ್ಮ ನಂದಿನಿ ಉಳಿಸಿಕೊಳ್ಳಬೇಕು. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು. ನಂದಿನಿಗೆ ಡಾ. ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಅವರು ಪ್ರಚಾರಕರಾಗಿದ್ದರು. ಸರ್ಕಾರ ಅವರನ್ನು ರಾಯಭಾರಿ ಮಾಡಿದ ಮೇಲೆ ಗೌರವಿಸಬೇಕು. ಡಾ. ರಾಜ್ ಕುಮಾರ್, ಡಾ. ಪುನೀತ್ ರಾಜ್ ಕುಮಾರ್ ಈಗ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ಸೇವೆ ಉಳಿದಿವೆ ಎಂದು ಸ್ಮರಿಸಿದರು.
ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಾವು ಅದನ್ನು ತಡೆಯಲು ಆಗಲ್ಲ ಅಂದಿದ್ದಾರೆ. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರಾಜ್ಯಕ್ಕೆ ಮಾಡಿದ ಸೇವೆ ಏನು? ಹಾಲು ಉತ್ಪಾದನೆ ಮಾಡುತ್ತಿರುವ ರೈತರು, ಹೆಣ್ಣುಮಕ್ಕಳು ಬದುಕಬೇಕು ಅಂತ ದೊಡ್ಡ ನಟರು ರಾಯಭಾರಿ ಆಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನೀವು ಅವರ ಬಗ್ಗೆ ಎಷ್ಟು ಗೌರವದ ಮಾತುಗಳನ್ನು ಆಡಿದ್ದೀರಿ. ಅವರನ್ನು ನೆನಪಿಸಿಕೊಳ್ಳುತ್ತಿದ್ದೀರಿ. ಪುನೀತ್ ರಾಜ್‌ಕುಮಾರ್‌ಗೆ ಮಾತು ಕೊಟ್ಟಿರುವುದು ಸುಳ್ಳಾ? ಎಂದರು.
ನಾನು ಪ್ರತಿಭಟನೆ ಮಾಡುತ್ತಿಲ್ಲ. ಹಾಲು, ಬಿಸ್ಕೆಟ್, ಮೈಸೂರು ಪಾಕ್, ಚಾಕ್‌ಲೇಟ್ ತಗೊಂಡಿದ್ದಿನಿ. ನಮ್ಮ ಮಕ್ಕಳು, ನಮ್ಮ ಹಾಲು ಕುಡಿಬೇಕು ಅಂತ ನಮ್ಮ ಜನರಿಗೆ ಹೇಳಿದ್ದೀನಿ. ನಾನು ಯಾರ ವಿರುದ್ಧವೂ ಪ್ರತಿಭಟನೆ ಮಾಡುತ್ತಿಲ್ಲ. ಬೆಳಗ್ಗೆ ಹಾಲು ಕುಡಿಯಬೇಕಿತ್ತು ಕುಡಿದಿದ್ದೇನೆ. ಬಿಸ್ಕೆಟ್ ತಿಂದಿದ್ದೇನೆ. ನಮ್ಮದನ್ನು ಉಳಿಸಿಕೊಳ್ಳಬೇಕು ಎಂದು ಕುಟುಕಿದರು.