

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಮತ್ತು ವಿಕೇಂಡ್ ಕರ್ಫ್ಯೂ ತೆರವುಗೊಂಡ ಹಿನ್ನೆಲೆಯಲ್ಲಿ ನಂದಿ ಗಿರಿಧಾಮಕ್ಕೆ ಶನಿವಾರ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಬೆಳಗಿನ ಚುಮುಚುಮು ಚಳಿ, ತುಂತುರು ಹನಿಗಳ ಸಿಂಚನ, ಮಂಜಿನ ಕಣ್ಣಾಮುಚ್ಚಾಲೆ ನಡುವೆ ವಾರಾಂತ್ಯದ ಖುಷಿ ಅನುಭವಿಸಿದರು.
ಸೋಂಕಿನ ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ಏ.26 ರಿಂದ ಗಿರಿಧಾಮ ಪ್ರವೇಶಕ್ಕೆ ನಿಷೇಧವಿತ್ತು. ಆದರೆ ಈಗ ಆರಂಭವಾಗಿದ್ದು, ಶನಿವಾರ 5 ಸಾವಿರ ಮಂದಿ ಬಂದಿದ್ದು, ಭಾನುವಾರ 10 ಸಾವಿರ ಜನ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ 5ಕ್ಕೆ ಪ್ರವಾಸಿಗರು ಆಗಮಿಸಿದ್ದರು. ಆದರೆ, ಚೆಕ್ ಪೋಸ್ಟ್ ಪೊಲೀಸರು ಬೆಳಗ್ಗೆ 6ರ ಬಳಿಕ ತೆರಳಲು ಅವಕಾಶ ನೀಡಿದರು. ಟೆಕ್ಕಿಗಳು, ಪ್ರೇಮಿಗಳು, ನೂತನ ದಂಪತಿ, ಕುಟುಂಬ ಸಮೇತ ಬಂದಿದ್ದ ಪ್ರವಾಸಿಗರು ಟಿಪ್ಪು ಡ್ರಾಪ್, ಬೇಸಿಗೆ ಅರಮನೆ, ನೆಹರೂ ನಿಲಯ, ಗಾಂಧಿ ನಿಲಯ, ಮಕ್ಕಳ ಉದ್ಯಾನ ವಿವಿಧೆಡೆ ಸುತ್ತಾಡಿ ಸಂತಸ ಪಟ್ಟರು.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ನಂದಿ ಗಿರಿಧಾಮದಲ್ಲಿ ಬೆಳಗ್ಗೆ ಮತ್ತು ಸಂಜೆ ಮಳೆಯ ಸಿಂಚನವಾಗುತ್ತಿದೆ. ದಟ್ಟವಾಗಿ ಮಂಜು ಆವರಿಸಿಕೊಂಡ ರೋಮಾಂಚನದ ದೃಶ್ಯ ಮುದ ನೀಡುತ್ತಿದೆ. ಗಿರಿಧಾಮಕ್ಕೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆಯ ನಡುವೆ ಸುಮಾರು 200 ಕಾರುಗಳು, 1200 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, ಮಿನಿಟೆಂಪೋ, ಆಟೋ ಮತ್ತಿತರ ವಾಹನಗಳು ಪ್ರವೇಶಿಸಿದವು. ರಸ್ತೆಯ ತಿರುವುಗಳಲ್ಲಿ ವಾಹನಗಳು ನಿಲುಗಡೆಯಾಗಿ ಟ್ರಾಫಿಕ್ ಜಾಮ್ ಉಂಟಾಗದಿರಲು ಪೊಲೀಸರು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬೈಕ್ ರೈಡಿಂಗ್ : ಗಿರಿಧಾಮದ ಕಣಿವೆ ಮಾರ್ಗದ ನಂದಿ ಕ್ರಾಸ್, ಕಾರಹಳ್ಳಿ ಕ್ರಾಸ್, ಕಣಿವೆ ಬಸವಣ್ಣ ರಸ್ತೆಯಲ್ಲಿ ಪಡ್ಡೆ ಹುಡುಗರು ಬೈಕ್ ರೈಡಿಂಗ್ ಸಾಹಸ ಪ್ರದರ್ಶಿಸಿದರು. ಜನ ಮತ್ತು ವಾಹನ ದಟ್ಟಣೆ ಇಲ್ಲದ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್, ರಿವರ್ರ್ಸ್ ಡ್ರೈವಿಂಗ್ ಸೇರಿ ಹಲವು ಸಾಹಸಗಳು ಕಂಡು ಬಂದವು. ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಪರಾರಿಯಾದರು. ಗಿರಿಧಾಮದ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಬೆಂಗಳೂರಿನ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು.
ಗಿರಿಧಾಮಕ್ಕೆ ಶನಿವಾರ ಬೆಂಗಳೂರು ಸೇರಿ ವಿವಿಧೆಡೆಯಿಂದ 5 ಸಾವಿರ ಪ್ರವಾಸಿಗರು ಆಗಮಿಸಿದ್ದರು. ಭಾನುವಾರ ಇನ್ನೂ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಕರೊನಾ ಮಾರ್ಗಸೂಚಿ ನಿಯಮ ಪಾಲನೆ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಗೋಪಾಲ್, ನಂದಿ ಗಿರಿಧಾಮ ತೋಟಗಾರಿ0ಕೆ ನಿರ್ವಹಣಾಧಿಕಾರಿ