ನಂದಿ ಮೂರ್ತಿ ಕೂಡಿಸಲು ಬಿಡೇವು

Basavaraj Dhannur
Published on

ಬೀದರ್: ಬಸವಕಲ್ಯಾಣದ ಪರುಷ ಕಟ್ಟೆ ಮೇಲೆ ಮತ್ತೆ ನಂದಿ ಮೂರ್ತಿ ಕೂಡಿಸಲು ಬಿಡೇವು ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.
ನಂದಿಗೂ ಪರುಷ ಕಟ್ಟೆಗೂ ಸಂಬಂಧವೇ ಇಲ್ಲ. ಹೀಗಾಗಿ ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಜೀರ್ಣೋದ್ಧಾರ ಪ್ರಯುಕ್ತ ತೆರವುಗೊಳಿಸಲಾದ ನಂದಿ ಮೂರ್ತಿಯನ್ನು ಪರುಷ ಕಟ್ಟೆ ಮೇಲೆ ಮರು ಸ್ಥಾಪಿಸುವ ಭರವಸೆ ಕೊಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಿಜ್ಜಳ ರಾಜನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರು ಆಸ್ಥಾನಕ್ಕೆ ಹೋಗುವ ಮುನ್ನ ಪರುಷ ಕಟ್ಟೆ ಮೇಲೆ ಕೂರುತ್ತಿದ್ದರು. ಜನರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ಕಲ್ಪಿಸುತ್ತಿದ್ದರು. ಹೀಗಾಗಿ ಆ ಸ್ಥಳವನ್ನು ಜನರು ಪರುಷ ಕಟ್ಟೆ ಎಂದು ಕರೆದರು ಎಂದು ಹೇಳಿದ್ದಾರೆ.
ಪರುಷ ಕಟ್ಟೆ ಮೇಲೆ ಮತ್ತೆ ನಂದಿ ಮೂರ್ತಿ ಪ್ರತಿಷ್ಠಾಪಿಸಿದರೆ ಬಸವಣ್ಣನವರಿಗೆ ಅವಮಾನ ಮಾಡಿದಂತಾಗಲಿದೆ. ಜತೆಗೆ, ಸ್ಪಷ್ಟವಾಗಿರುವ ಇತಿಹಾಸದ ಬಗ್ಗೆ ಗೊಂದಲ ಮೂಡಿಸಿದಂತೆಯೂ ಆಗಲಿದೆ ಎಂದು ತಿಳಿಸಿದ್ದಾರೆ.
ಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ. ಕೆಳಗೆ ಬಿದ್ದವರು, ತುಳಿತಕ್ಕೆ ಒಳಗಾದವರು, ಅಸಹಾಯಕರು, ಧ್ವನಿ ಇಲ್ಲದವರು, ಶೋಷಿತರನ್ನು ಮೇಲಕ್ಕೆ ಎತ್ತಿ ಸಮಾಜದ ಮುಖ್ಯ ವಾಹಿನಿಗೆ ತಂದ ಮಹಾ ಪ್ರವಾದಿ. ಸಮ ಸಮಾಜದ ನಿರ್ಮಾಪಕ, ದಲಿತೋದ್ಧಾರಕ, ಚಾರಿತ್ರಿಕ- ಐತಿಹಾಸಿಕ ಯುಗ ಪುರುಷ. ಅವರಿಗೂ- ನಂದಿಗೂ ಥಳಕು ಹಾಕುವುದು ಸಲ್ಲದು ಎಂದು ಹೇಳಿದ್ದಾರೆ.
12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಮಾನವೀಯತೆಗಾಗಿ ಮಹಾ ಕ್ರಾಂತಿ ನಡೆದಿತ್ತು. ಬಸವಣ್ಣನವರು ಜಗತ್ತಿಗೆ ಬೆಳಕು ನೀಡುವ ವಚನ ಸಾಹಿತ್ಯ ನೀಡಿದರು. ಪ್ರಜಾಪ್ರಭುತ್ವದ ಮೌಲ್ಯ ಕೊಟ್ಟರು. ಮೊಟ್ಟದ ಮೊದಲ ಬಾರಿಗೆ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ವಿಶ್ವದ ಮೊದಲ ಸಂಸತ್ ಎಂದೇ ಕರೆಯಲಾಗುವ ಅನುಭವ ಮಂಟಪ ನಿರ್ಮಿಸಿದರು ಎಂದು ತಿಳಿಸಿದ್ದಾರೆ.
ಪರುಷ ಕಟ್ಟೆಯ ಜೀರ್ಣೋದ್ಧಾರ ನಡೆಯುತ್ತಿರುವುದು ಸಂತಸದ ಸಂಗತಿ. ಚಾರಿತ್ರಿಕ ಮಹತ್ವ ಹೊಂದಿರುವ ಕಾರಣ ಅದಕ್ಕೆ ಸುಂದರ ಸ್ವರೂಪ ಕೊಡಬೇಕಾಗಿದೆ. ಆದರೆ, ಇಲ್ಲಿ ಹಿಂದೆ ಆದ ತಪ್ಪು ಮತ್ತೆ ಮರುಕಳಿಸಬಾರದು. ಮುಂದಿನ ಪೀಳಿಗೆಗೆ ಸರಿಯಾದ ಇತಿಹಾಸ ತಿಳಿಸಲು ಜೀಣೋದ್ಧಾರದ ಬಳಿಕ ಪರುಷ ಕಟ್ಟೆಯ ಮೇಲೆ ಬಸವಣ್ಣನವರ ಕುಳಿತ ಭಂಗಿಯ ಕಂಚಿನ ಇಲ್ಲವೇ ಅಮೃತ ಶಿಲೆಯ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಸವೇಶ್ವರ ಮೂರ್ತಿಗೆ  ರೂ. 5 ಲಕ್ಷ ದೇಣಿಗೆಗೆ ಸಿದ್ಧ

ಬೀದರ್: ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ರೂ. 5 ಲಕ್ಷ ದೇಣಿಗೆ ಕೊಡಲು ಸಿದ್ಧ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ. ಇಂಗ್ಲಂಡ್, ಅಮೆರಿಕ ಸೇರಿ ವಿವಿಧ ರಾಷ್ಟ್ರಗಳಲ್ಲಿ ಮಹಾ ಮಾನವತಾವಾದಿ ಬಸವಣ್ಣನವರ ಮೂರ್ತಿ ಸ್ಥಾಪನೆಯಾಗುತ್ತಿವೆ. ದೇಶದ ಸಂಸತ್ತು, ವಿಧಾನಸೌಧದ ಮುಂಭಾಗದಲ್ಲೂ ಸ್ಥಾಪನೆಯಾಗಿವೆ. ಹೀಗಾಗಿ ಅವರ ಕಾರ್ಯ ಕ್ಷೇತ್ರದಲ್ಲಿ ನಿತ್ಯ ಜನರ ಅಹವಾಲು ಆಲಿಸುತ್ತಿದ್ದ ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎನ್ನುವುದು ಬಸವ ಭಕ್ತರ ಮಹದಾಸೆಯಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net