

ಚಿಕ್ಕಬಳ್ಳಾಪುರ : ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಂದಿ ಗಿರಿಧಾಮವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಒಪ್ಪಿಸುವ ಬಗ್ಗೆ ಕೇವಲ ಮೌಖಿಕವಾಗಿ ಹೇಳಲಾಗಿದೆ. ಆದರೆ, ಹಸ್ತಾಂತರ ಮಾಡುವುದಿಲ್ಲ ಎಂದು ತೋಟಗಾರಿಕಾ ಸಚಿವ ನಾರಾಯಣ ಗೌಡ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ನಂದಿ ಗಿರಿಧಾಮದಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸ್ತವ್ಯ ಹೂಡಿದ್ದ ಸಚಿವರು ಬುಧವಾರ ಸುದ್ದಿಗಾರರಿಗೆ ನಂದಿ ಗಿರಿಧಾಮದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.ನಂದಿ ಗಿರಿಧಾಮವನ್ನು ತೋಟಗಾರಿಕಾ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಒಪ್ಪಿಸುವ ವಿಚಾರವಾಗಿ ಚರ್ಚೆಯಾಗುತ್ತಿದೆ. ಇದರ ನಡುವೆ ಹಸ್ತಾಂತರಕ್ಕೆ ವಿರೋಧ ವ್ಯಕ್ತವಾಗಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ನನ್ನ ಸಮ್ಮತವಿದೆ. ಹಸ್ತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಗಿರಿಧಾಮವು ಔಷಧ ಸಸ್ಯಧಾಮ, ಆರೋಗ್ಯ ಧಾಮ ಎಂತಲೂ ಹೆಸರು ಪಡೆದಿದೆ. ಇದರ ಸಂರಕ್ಷಣೆಗೆ ತೋಟಗಾರಿಕಾ ಇಲಾಖೆಯ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ಅದರಂತೆ ಗಿರಿಧಾಮವನ್ನು ನಮ್ಮ ಇಲಾಖೆಯೇ ನಿರ್ವಹಣೆ ಹೊಣೆ ಹೊತ್ತು ಅಭಿವೃದ್ಧಿಪಡಿಸುತ್ತದೆ ಎಂದು ತಿಳಿಸಿದರು.
ಗಿರಿಧಾಮದ ಬಗ್ಗೆ ಮೆಚ್ಚುಗೆ : ನಂದಿ ಗಿರಿಧಾಮದ ಪ್ರಾಕೃತಿಕ ಸೊಬಗಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇದು ಸುಂದರವಾದ ತಾಣ ಎಂದು ಬಣ್ಣಿಸಿದರು. ಇಲಾಖೆಯ ಅಧಿಕಾರಿಗಳೊಂದಿಗೆ ಗಿರಿಧಾಮದಲ್ಲಿ ಸುತ್ತಾಡಿದ ಸಚಿವರು, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದರು. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದರ ಜತೆಗೆ ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗೆ ಅಗತ್ಯ ಅನುದಾನ ನೀಡಲಾಗುವುದು. ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.