

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಶನೈಶ್ಚರಸ್ವಾಮಿಯ 14ನೇ ರ್ಷದ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ದೇಗುಲದ ಸುರೇಶ್ ಸ್ವಾಮಿ ನೇತೃತ್ವದಲ್ಲಿ ಗೋಧೂಳಿ ಲಗ್ನದಲ್ಲಿ ಮೊದಲ ದಿನ ಪವಿತ್ರ ಪೂಜೆಯೊಂದಿಗೆ ಮಹೋತ್ಸವ ಆರಂಭವಾಗಿತ್ತು. ಗಣಪತಿ ಪೂಜೆ, ಸ್ವಾಮಿಗೆ ಮಹಾ ರುದ್ರಾಭಿಷೇಕ, ಗಣಪತಿ ನವಗ್ರಹ ಹೋಮ ನಡೆಯಿತು. ಎರಡನೇ ದಿನ ಅಷ್ಟೋತ್ತರ ಪೂಜೆ ಹಾಗೂ ಸ್ವಾಮೀಯ ಮಹಾ ಕೊಂಡೋತ್ಸವ ನಡೆಯಿತು.
ಮಹಾ ಮಂಗಳಾರತಿ, ಪೂಜೆ ಬಳಿಕ ನೆರೆದಿದ್ದ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಎರಡು ದಿನಗಳ ಕಾಲ ನಡೆದ ದೇವರ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನ ಹಾಗೂ ಗ್ರಾಮದ ಮುಖ್ಯ ಬೀದಿಯನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಜಾತ್ರ ಮಹೋತ್ಸವದಲ್ಲಿ ನಂದಗೋಡನಹಳ್ಳಿ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.