ನಂದಗುಡಿಯಲ್ಲಿ ಕ್ಯಾಟ್‌ಫಿಷ್ ದಂಧೆ!

000
Published on

ಅಕ್ರಮಕ್ಕೆ ಸಾಥ್ ನೀಡುತ್ತಿರುವ ಕಾಣದ ಕೈಗಳು

ಎಂ.ರಾಮೇಗೌಡ ನಂದಗುಡಿ
ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಆಫ್ರಿಕನ್ ಕ್ಯಾಟ್‌ಫಿಷ್ ಸಾಕಣೆಯನ್ನು ಹೈಕೋರ್ಟ್ 2012ರಲ್ಲೇ ನಿಷೇಧಿಸಿದ್ದರೂ, ಹೋಬಳಿಯ ಹಲವು ಕಡೆಗಳಲ್ಲಿ ಅಕ್ರಮವಾಗಿ ಕ್ಯಾಟ್‌ಫಿಷ್ ಸಾಕಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಜಾಣ ಮೌನ ತಾಳಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸಕೋಟೆ ತಾಲೂಕಿನ ನಂದಗುಡಿಯ ಬೈಲನರಸಾಪುರ, ಎನ್.ಹೊಸಹಳ್ಳಿ, ಗೆದ್ದಲಹಳ್ಳಿಪುರ ಸೇರಿ ಹಲವು ಗ್ರಾಮಗಳ ಕೆರೆ ಅಂಗಳ ಹಾಗೂ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡಿರುವ ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ಫಿಷ್ ಸಾಕಣೆ ನಿರಾತಂಕವಾಗಿ ನಡೆಯುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಿ ಹಲವು ಬಗೆಯ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಹೊಸಕೋಟೆ, ಬೆಂಗಳೂರು ಸೇರಿ ವಿವಿಧ ನಗರ ಪ್ರದೇಶಗಳಿಂದ ರವಾನೆಯಾಗುವ ಕಸಾಯಿ ಖಾನೆಯ ಮಾಂಸದ ತ್ಯಾಜ್ಯ, ಸತ್ತ ಪ್ರಾಣಿಗಳು ಮತ್ತು ರೇಷ್ಮೆ ಹುಳುಗಳನ್ನು ಮೀನುಗಳಿಗೆ ಆಹಾರವಾಗಿ ನೀಡುತ್ತಿರುವುದರಿಂದ ಅಂತಹ ಭಾಗಗಳಲ್ಲಿ ದುರ್ವಾಸನೆ ಬೀರುತ್ತಿರುವ ಜತೆಗೆ ಅನೈರ್ಮಲ್ಯ ತಾಂಡವವಾಡುತ್ತಿದೆ. ಇದರ ನಡುವೆ, ನಾಯಿ, ಹದ್ದು ಮತ್ತು ಇತರ ಪಕ್ಷಿಗಳು ಕೊಳೆತು ನಾರುವ ಮಾಂಸಕ್ಕಾಗಿ ಗ್ರಾಮಗಳನ್ನು ಸುತ್ತುವರಿಯುವುದು ಸ್ಥಳೀಯರ ನೆಮ್ಮದಿ ಕಸಿದಿದೆ.
ಅಕ್ರಮವಾಗಿ ಸಾಕಿದ ಕ್ಯಾಟ್‌ಫಿಷ್‌ಗಳನ್ನು ಲೋಡುಗಟ್ಟಲೆ ಬೆಂಗಳೂರು, ಆಂಧ್ರಪ್ರದೇಶ, ಕೋಲ್ಕತ್ತ ಸೇರಿ ದೊಡ್ಡ ನಗರಗಳಿಗೆ ರವಾನೆ ಮಾಡಗುತ್ತಿದೆ. ಪ್ರತಿ ಲೋಡ್‌ಗೆ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದೆ. ಈ ಎಲ್ಲ ಚಟುವಟಿಕೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಅರಿವಿದ್ದರೂ ಕ್ರಮ ಕೈಗೊಳ್ಳುವ ಬದಲಿಗೆ ಹಣಕ್ಕಾಗಿ ದಂಧೆಕೋರರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.


ಅಧಿಕಾರಿಗಳಿಂದಲೇ ರಕ್ಷಣೆ?: ಜಿಲ್ಲಾ ವ್ಯಾಪ್ತಿಯಲ್ಲಿ ಆಫ್ರಿಕನ್ ಕ್ಯಾಟ್‌ಫಿಷ್ ಪಾಲನೆ ನಿರ್ಬಂಧಿಸಿ 2017ರ ಸೆಪ್ಟೆಂಬರ್ 4ರಂದು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಇಂತಹ ಮೀನುಗಳನ್ನು ನಿರ್ಮೂಲನೆಗೊಳಿಸಲು ಉಪವಿಭಾಗಾಕಾರಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಡಿವೈಎಸ್‌ಪಿ, ತಹಸೀಲ್ದಾರ್, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಒಳಗೊಂಡ ತಂಡವನ್ನು ರಚಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು, ನಾಗರಿಕರಿಂದ ಈ ಬಗ್ಗೆ ದೂರುಗಳು ಹೆಚ್ಚಾದಾಗ ದಾಳಿಗೆ ಮುಂಚಿತವಾಗಿಯೇ ಮಾಹಿತಿ ಸೋರಿಕೆ ಮಾಡಿ ದಂಧೆಕೋರರು ತಪ್ಪಿಸಿಕೊಳ್ಳಲು ಬೆನ್ನಹಿಂದೆ ನಿಂತಿದ್ದಾರೆ. ಕಾಟಾಚಾರಕ್ಕೆ ದಾಳಿ ನಡೆಸಿ, ಸುಮ್ಮನಾಗುತ್ತಾರೆಯೇ ವಿನಃ, ಸಂಪೂರ್ಣವಾಗಿ ನಿಷೇಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಟ್‌ಫಿಷ್ ಹೊಂಡಗಳನ್ನು ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಬೇರೊಂದು ಕಡೆ ಹೊಂಡ ತೆಗೆದು ಮತ್ತೆ ದಂಧೆ ಪ್ರಾರಂಭಿಸುತ್ತಾರೆ. ಕ್ಯಾಟ್‌ಫಿಷ್ ಸಾಕಣೆ ಮಾಡುವವರಿಗೆ ಜನಪ್ರತಿನಿಧಿಗಳೇ ಬೆಂಬಲವಾಗಿರುವ ಆರೋಪವೂ ಇದೆ. ಇದರಿಂದ ತೆರವುಗೊಳಿಸುವ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಸದ ಅಧಿಕಾರಿ ಒಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಷ್‌ಗೆ ಕೊಳೆತ ಮಾಂಸದ ತ್ಯಾಜ್ಯವನ್ನು ಆಹಾರವಾಗಿ ನೀಡುವುದರಿಂದ, ಆ ಭಾಗದ ಪರಿಸರ ಕಲುಷಿತವಾಗುತ್ತದೆ. ಇಂತಹ ಮೀನನ್ನು ಸೇವಿಸುವವರಲ್ಲಿ ಪ್ರಮುಖವಾಗಿ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ದೀರ್ಘಾವಧಿ ಸೇವನೆಯಿಂದ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಡಾ.ಭಾಸ್ಕರ್ ರೆಡ್ಡಿ ವೈದ್ಯಾಧಿಕಾರಿ, ನಂದಗುಡಿಯಾರ ಭಯವಿಲ್ಲದೆ ಕ್ಯಾಟ್‌ಫಿಷ್ ಸಾಕಣೆ ದಂಧೆ ಸೇರಿ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ, ಇಲ್ಲಿನ ಜನತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೇಲಿಯೇ ಎದ್ದು ಹೊಲ ಮೇಯುವಂತಾಗಿದೆ ಇಲ್ಲಿನ ಪರಿಸ್ಥಿತಿ. ಶ್ರೀನಿವಾಸ್ ಎನ್.ಹೊಸಹಳ್ಳಿ ಗ್ರಾಮಸ್ಥಕೊಳೆತ ಮಾಂಸದ ತ್ಯಾಜ್ಯವನ್ನು ಹಾಡಹಗಲೇ ಟೆಂಪೋಗಳಲ್ಲಿ ತಂದು ಕ್ಯಾಟ್ ಫಿಷ್ ಹೊಂಡಗಳಿಗೆ ಸುರಿಯುತ್ತಾರೆ. ಯಾವುದೇ ಅಧಿಕಾರಿ ಇದನ್ನು ಪ್ರಶ್ನಿಸುವ ಧೈರ್ಯ ಪ್ರದರ್ಶಿಸದೆ, ದಂಧೆಕೋರರ ಲಾಬಿಗೆ ಒಳಗಾಗಿ ಪರಿಸರ ಹಾಳು ಮಾಡಿ, ಜನರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಯಾಕೂಬ್ ಪಾಷಾ ಬೈಲನರಸಾಪುರ ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net