ನಂದಗುಡಿ ಟೌನ್‌ಶಿಪ್‌ಗೆ ರೈತರಿಂದ ಭಾರಿ ವಿರೋಧ

00000
Published on

ರಕ್ತ ಹರಿಸಿದರೂ ಭೂಮಿ ಕೊಡಲ್ಲ ಎಂದ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ

ವಿಜಯವಾಣಿ ಸುದ್ದಿಜಾಲ ನಂದಗುಡಿ
ನಂದಗುಡಿ ಟೌನ್‌ಶಿಪ್‌ಗಾಗಿ 18,500 ಸಾವಿರ ಎಕರೆ ಭೂಮಿ ವಶಕ್ಕೆ ಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲು ರೈತರು ಹೊಸಕೋಟೆ ತಾಲೂಕು ನಂದಗುಡಿಯ ಶ್ರೀಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಸಭೆ ನಡೆಸಿದರು.
ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಟೌನ್‌ಶಿಪ್‌ಗಾಗಿ ನಂದಗುಡಿ ಭಾಗದ ಸುತ್ತಮುತ್ತಲ 36 ಗ್ರಾಮಗಳ 18,500 ಸಾವಿರ ಎಕರೆ ಜಮೀನು ವಶಕ್ಕೆ ಪಡೆದು, ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಪ್ರತಿ ಎಕರೆಯೊಂದಕ್ಕೆ 8 ಗುಂಟೆ ಭೂಮಿಯನ್ನು ರೈತರಿಗೆ ಕೊಡಲು ಮುಂದಾಗಿದೆ. ಯಾರೋ ಹೂಡಿಕೆದಾರರನ್ನು ನಂಬಿಕೊಂಡು ಸರ್ಕಾರ ನೋಟಿಫಿಕೇಷನ್ ಹೊರಡಿಸುತ್ತಿದ್ದು, ಹೂಡಿಕೆದಾರರೇ ಬರದಿದ್ದರೆ ಕೃಷಿ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ರೈತರು ಏನು ಮಾಡಬೇಕು. ಅಧಿಕಾರ ಇದೆ ಅಂತ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸಕ್ಕೆ ಮುಂದಾದರೆ, ರಕ್ತ ಹರಿಸಿಯಾದರೂ ಸರಿಯೇ ಭೂಮಿಯನ್ನು ರಕ್ಷಿಸಿಕೊಳ್ಳುತ್ತೇವೆ ಎಂದರು.

ಪ್ರಾಣ ಬಿಡಲೂ ಹೆದರುವುದಿಲ್ಲ: ಸರ್ಕಾರ ಈ ಭಾಗದ ಕೆರೆಗಳಿಗೆ ನೀರು ತುಂಬಿಸಿದರೆ, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರಗತಿ ಹೊಂದುತ್ತಾದೆ. 2006ರಿಂದಲೂ ನಂದಗುಡಿ ಭಾಗವನ್ನು ರಾಜ್ಯ ಸರ್ಕಾರ ಹಸಿರು ವಲಯದಲ್ಲಿಟ್ಟಿದ್ದು, ಯೆಲ್ಲೋ ಝೋನ್‌ಗೆ ಪರಿವರ್ತಿಸಿದರೆ, ತಾನಾಗಿಯೇ ಅಭಿವೃದ್ಧಿಯಾಗುತ್ತದೆ. ಪ್ರಸ್ತುತ ಪ್ರತಿ ಎಕರೆಗೆ ಕೋಟಿ ರೂ. ಬೆಲೆ ಇದ್ದು, ರಾಜ್ಯ ಸರ್ಕಾರ ನಂದಗುಡಿ ಟೌನ್‌ಶಿಪ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಹಾಗೊಂದು ವೇಳೆ ಟೌನ್‌ಶಿಪ್ ಮಾಡಲು ಮುಂದಾದರೆ ಪ್ರಾಣ ಬಿಡಲೂ ಹೆದರುವುದಿಲ್ಲ ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಹಕ್ಕಲೇಗೌಡ ಎಚ್ಚರಿಸಿದರು. ಎಲ್ಲ ಬಗೆಯ ಹೋರಾಟಕ್ಕೂ ಸಿದ್ಧರಾಗಿದ್ದೇವೆ. ಚಳವಳಿ ನಡೆಸಲು ಹೋರಾಟ ಸಮಿತಿಯನ್ನೇ ರಚಿಸುತ್ತೇವೆ. ಯಲ್ಲೋ ಜೋನ್ ಆಗಿ ಘೋಷಿಸಬೇಕು. ಕೆರೆಗಳಿಗೆ ನೀರು ಹರಿಸಿ ರೈತರನ್ನು ಬದುಕು ಹಸನು ಮಾಡಬೇಕು ಎಂದು ರೈತರು ಒತ್ತಾಯಿಸಿದ್ದರು.


ರಿಯಲ್ ಎಸ್ಟೇಟ್‌ಗೆ ಅವಕಾಶ ಕೊಡುವುದಿಲ್ಲ: ಇದು ರೈತರ ಬದುಕು ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿದ್ದು, ನೋಟಿಫಿಕೇಷನ್ ಹೊರಡಿಸಿ, ರಿಯಲ್ ಎಸ್ಟೇಟ್ ಮಾಡಲು ಬಂದರೆ, ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ತರಾತುರಿಯಲ್ಲಿ ನೋಟಿಫಿಕೇಶನ್ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಹೋರಾಟಕ್ಕೆ ಧುಮುಕುತ್ತೇವೆ ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net