

ಖಾನಾಪುರ: ನಂದಗಡ ಗ್ರಾಮದ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ. ಸರ್ಕಾರದಿಂದ ಪ್ರವಾಸಿ ತಾಣದ ಸ್ಥಾನಮಾನ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಮಹಾಲಕ್ಷ್ಮೀ ಯಾತ್ರೆಯಲ್ಲಿ ಲಕ್ಷಗಟ್ಟಲೆ ಜನರಿಗೆ ತೊಂದರೆಯಾಗುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಯೋಜನೆಗಳನ್ನು ಸಿದ್ಧಪಡಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ನಂದಗಡ ಗ್ರಾಮದಲ್ಲಿ 25 ವರ್ಷಗಳ ನಂತರ 2025ರ ೆ.12ರಿಂದ 11 ದಿನಗಳ ಕಾಲ ಜರುಗಲಿರುವ ಲಕ್ಷ್ಮೀದೇವಿ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ತಾಲೂಕಾಡಳಿತದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಗ್ರಾಪಂನಿಂದ ತಾಲೂಕುಮಟ್ಟದ ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರವತ್ತರಾಗಿ ಗ್ರಾಮಕ್ಕೆ ಪೂರ್ಣ ಪ್ರಮಾಣದ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ನಂದಗಡ ಗ್ರಾಮದ ಸಮಸ್ಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು ವರದಿ ಹಾಗೂ ಅಗತ್ಯ ಕಾಮಗಾರಿಗಳ ಪಟ್ಟಿಯನ್ನು ತಿಂಗಳೊಳಗೆ ಪೂರ್ಣಗೊಳಿಸಬೇಕು. ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳ ಅಭಿವದ್ಧಿಗೆ ಸಂಗೊಳ್ಳಿ ರಾಯಣ್ಣ ವಿಕಾಸ ಪ್ರಾಧಿಕಾರದಿಂದ 75.29 ಕೋಟಿ ರೂ. ವೆಚ್ಚದ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಮತ್ತು ಪರಿಸರ ವಿಕಾಸಕ್ಕಾಗಿ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಡಿಸೆಂಬರ್ ಅಥವಾ ಜನವರಿ ಒಳಗಾಗಿ ಉದ್ಘಾಟನೆ ಆಗಲಿದೆ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ವಿಲಾಸರಾಜ್, ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಗುರವ, ಉಪಾಧ್ಯಕ್ಷ ದೊಡಮನಿ, ಸದಸ್ಯರು, ಜಾತ್ರೆ ಸಮಿತಿ ಅಧ್ಯಕ್ಷ ಸುಭಾಷ ಪಾಟೀಲ, ಸದಸ್ಯರಾದ ಪಿ.ಕೆ.ಪಾಟೀಲ, ಗುಂಡು ಹಳಶಿಕರ, ಪ್ರಸಾದ ಪಾಟೀಲ, ನರಸಿಂಗ ಪಾಟೀಲ, ರಾಜೀವ ಕಪೂರ, ರಾಜು ಪಾಟೀಲ ಇತರರಿದ್ದರು.