ನಂಜೇದೇವನಪುರ ಅಭಿವೃದ್ಧಿಗೆ ಕೋಟಿ ರೂ.ಅನುದಾನ

04raju1
Published on

ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಈ ಗ್ರಾಮದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಯೋಜನೆಯಡಿ ಒಂದು ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿರುವುದಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.


ಗ್ರಾಮದ ಮುಖ್ಯರಸ್ತೆಯಿಂದ ಶ್ರೀನಂಜುಂಡೇಶ್ವರ ದೇವಸ್ಥಾನದವರೆಗೆ 40 ಲಕ್ಷ ರೂ.ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದ ಅವರು, ನಂಜೇದೇವನಪುರ ಗ್ರಾಮದ ಬೀದಿ ಹಾಗೂ ಕಾಲನಿ ಅಭಿವೃದ್ಧಿಗೆ ಕಳೆದ ಒಂದು ವರ್ಷದಿಂದ ಹೆಚ್ಚು ಒತ್ತು ನೀಡಿ, ಒಂದು ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದ್ದೇವೆ ಎಂದರು.


ಗ್ರಾಮದ ಮುಖಂಡ ಪಿ.ರಾಜಣ್ಣ ಮಾತನಾಡಿ, ಶಾಸಕ ಸಿ. ಪುಟ್ಟರಂಗಶೆಟ್ಟರು ಸರಳ ವ್ಯಕ್ತಿತ್ವವುಳ್ಳವರಾಗಿದ್ದು, ಜನಪರ ಕಾರ್ಯಕ್ರಮಗಳ ಮೂಲಕ ಈಗಾಗಲೇ ಜನರ ಮನಸ್ಸಿನಲ್ಲಿದ್ದಾರೆ. ನಮ್ಮ ಗ್ರಾಮಕ್ಕೆ ಹೆಚ್ಚಿನ ಒತ್ತು ನೀಡಿ, ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ. ಅವರನ್ನು ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸಲು ಶ್ರಮಿಸೋಣ ಎಂದರು.


ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ.ಶಿವಸ್ವಾಮಿ, ಜಿಪಂ ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ಗ್ರಾಪಂ ಅಧ್ಯಕ್ಷೆ ಮೇಘಶ್ರೀ, ಸದಸ್ಯರಾದ ಪಿ.ಶೇಖರ್, ಗುರುರಾಜ್, ಶಶಿಕಲಾ ಶಾಂತಪ್ಪ, ಪಟೇಲ್ ಗುರುಮಲ್ಲಪ್ಪ, ಮಾಜಿ ಸದಸ್ಯ ಎನ್.ಎಂ.ಮಹೇಶ್, ಮುಖಂಡರಾದ ಮಹೇಶ್, ಕುದರ್, ಬೆಳ್ಳಿ ಮಾದಪ್ಪ, ಮಲ್ಲೇಶ್, ಕೆ.ಎಲ್.ಶಾಂತಪ್ಪ. ಬಸವಣ್ಣ, ಮಹದೇವೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net