

ನಂಜನಗೂಡು: ಮಕ್ಕಳ ಬಹುಮುಖ ಪ್ರತಿಭೆಗೆ ಶಾಲೆಯ ಶಿಕ್ಷಕವರ್ಗ ಹಾಗೂ ಪಾಲಕರು ಪ್ರೋತ್ಸಾಹ ನೀಡಿದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ನಗರದ ಕಾರ್ಮೆಲ್ ಶಾಲೆಯಲ್ಲಿ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಬಾಲಕನಾಗಿದ್ದಾಗ ಸತತವಾಗಿ 5 ವರ್ಷ ವೇಷಭೂಷಣ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದೆ. ಈಗಿನ ಮಕ್ಕಳ ಕಲಾ ಪ್ರತಿಭೆಯನ್ನು ಕಂಡು ವಿಸ್ಮಯ ಪಡುವಂತಾಗಿದೆ. ನಮ್ಮ ವಿದ್ಯಾರ್ಥಿ ಜೀವನದಲ್ಲಿ ಇಂತಹ ಪ್ರತಿಭಾನ್ವಿತ ಮಕ್ಕಳ ಜತೆಗೆ ಸ್ಪರ್ಧಿಸಿ ಬಹುಮಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಉತ್ತಮ. ಸುಸಜ್ಜಿತ ಕಲಾಭವನದ ಅವಶ್ಯಕತೆಯಿದೆ. ನಂಜನಗೂಡು ನಗರದ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಸುಸಜ್ಜಿತ ಶಿಕ್ಷಕರ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ತೊಟ್ಟು ಮನರಂಜಿಸಿದರು. ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ಬಿಇಒ ರಾಜು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೆ.ಜಿ.ಮಹೇಶ್, ಕಾರ್ಮೆಲ್ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಕ್ಯಾರೊಲಿನಾ, ಸೋಮೇಶ್, ನೀಲಾ, ಮಾರ್ಗರೇಟ್, ಸುನಂದಾ, ಮಹದೇವಮೂರ್ತಿ, ಪುಟ್ಟರಾಜು ಮತ್ತಿತರರಿದ್ದರು.