ನ. 8ಕ್ಕೆ ಕನಕ ಜಯಂತಿ ಅದ್ದೂರಿ ಆಚರಣೆ

CTD Kanakadasaru ----------
Published on

ಚಿತ್ರದುರ್ಗ: ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿ ನ. 8ರಂದು ಬೆಳಗ್ಗೆ 11.30ಕ್ಕೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಕನಕದಾಸರ ಹಾಗೂ ಮಾಳಪ್ಪನಹಟ್ಟಿ ರಸ್ತೆಯ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಲಿದೆ. ಹೀಗಾಗಿ ಎರಡೂ ಕಡೆಗಳಲ್ಲೂ ನಗರಸಭೆ ಸ್ವಚ್ಛತೆ ಕೈಗೊಳ್ಳಬೇಕು. ಕನಕ ವೃತ್ತದಲ್ಲಿ ನೀರಿನ ಕಾರಂಜಿ, ನಗರದ ಎಲ್ಲ ವೃತ್ತಗಳಲ್ಲೂ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಉತ್ಸವದಲ್ಲಿ ಕನಕದಾಸರ ಕೀರ್ತನೆಗಳ ಗೀತ ಗಾಯನ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಒಂದು ವೇಳೆ ಮಳೆಯ ಮುನ್ಸೂಚನೆ ಕಂಡುಬಂದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಕನಕ ವೃತ್ತದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಡಯಲಿದೆ. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಕುರುಬರ ವಸತಿ ನಿಲಯದ ಬಳಿ ಸಂಪನ್ನಗೊಳಿಸಲಾಗುವುದು. ಜನಪದ ಕಲಾತಂಡಗಳು ಭಾಗವಹಿಸಲಿವೆ. ಭದ್ರತೆ, ಸುಗಮ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಕನಕದಾಸರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಅಂದು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ, ಗ್ರಾಪಂಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತಪ್ಪದೇ ಆಚರಿಸಬೇಕು. ಈ ಕುರಿತು ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಡಿಡಿಪಿಐ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್, ಖಜಾಂಚಿ ಮೃತ್ಯುಂಜಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಮುಖಂಡರಾದ ಎಸ್‌ಬಿಎಲ್ ಮಲ್ಲಿಕಾರ್ಜುನ್, ಓಂಕಾರಪ್ಪ, ಯೋಗೀಶ್ ಸಹ್ಯಾದ್ರಿ, ರಾಜಣ್ಣ, ಉಮೇಶ್, ಕೃಷ್ಣಮೂರ್ತಿ, ರಮೇಶ್, ಮಧು, ಈಶ್ವರಪ್ಪ ಇತರರಿದ್ದರು.

4 ಸ್ಪೀಕರ್‌ನ ಧ್ವನಿವರ್ಧಕಕ್ಕೆ ಅವಕಾಶ

ಜಿಲ್ಲೆಯಲ್ಲಿ ಈಗಾಗಲೇ ಡಿಜೆ ನಿಷೇಧಿಸಲಾಗಿದೆ. ಸಮುದಾಯದ ಕೋರಿಕೆಯಂತೆ 4 ಸ್ಪೀಕರ್ ಒಳಗೊಂಡ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕ, ಸ್ಪೀಕರ್‌ಗಳನ್ನು ಬಳಸಿದರೆ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net