

ಕೆ.ಆರ್.ನಗರ: ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ಸಂಗ್ರಹ ರಥ ಮಡಿಕೇರಿ, ಪಿರಿಯಾಪಟ್ಟಣದಿಂದ ಕೆ.ಆರ್.ನಗರ ತಾಲೂಕಿಗೆ ನ.5 ರಂದು ಪ್ರವೇಶಿಸಲಿದ್ದು, 6 ಮತ್ತು 7ರಂದು ತಾಲೂಕಿನಾದ್ಯಂತ ಸಂಚರಿಸಿ ಮಣ್ಣು ಸಂಗ್ರಹಿಸಲಿದೆ ಎಂದು ತಹಸೀಲ್ದಾರ್ ಎಂ.ಎಸ್.ಯಧುಗಿರೀಶ್ ಮಾಹಿತಿ ನೀಡಿದರು.
ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಾಡುಪ್ರಭು ಕೆಂಪೇಗೌಡರ 108 ಅಡಿ ವಿಗ್ರಹಕ್ಕೆ ಮಣ್ಣು ಸಂಗ್ರಹಿಸಿಕೊಡುವ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾಡಳಿತದ ಆದೇಶದಂತೆ ತಾಲೂಕು ಆಡಳಿತವು ಎಲ್ಲ ಸಂಘ-ಸಂಸ್ಥೆಗಳ ಸಲಹೆ ಮೇರೆಗೆ ರಥವನ್ನು ಅದ್ದೂರಿಯಾಗಿ ತಾಲೂಕಿನ ಗಡಿ ಭಾಗದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಆಡಳಿತ ವತಿಯಿಂದ ಬರಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಎರಡು ತಾಲೂಕಿನ 34 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಫಲವತ್ತಾದ ಒಂದೂವರೆ ಅಡಿ ಆಳದ ಶುದ್ಧ 250 ಗ್ರಾಂ ಮಣ್ಣನ್ನು ಶೇಖರಿಸಿ ಕೊಡುವಂತೆ ಈಗಾಗಲೇ ತಾಪಂ ಇಒ ಸತೀಶ್ ಅವರು ಮಾಹಿತಿ ನೀಡಿದ್ದಾರೆ. ಅದಲ್ಲದೆ ಸಮುದಾಯದ ಮುಖಂಡರು ಮತ್ತು ಎರಡೂ ತಾಲೂಕು ಆಡಳಿತ ವತಿಯಿಂದ ಪ್ರಸಿದ್ಧ ದೇವಾಲಯಗಳ ಪಕ್ಕದಲ್ಲಿ ಇರುವ ಮಣ್ಣನ್ನು ಶೇಖರಿಸಿ ಕೊಡಲಾಗುವುದು ಎಂದರು.
ತಾಪಂ ಇಒ ಸತೀಶ್, ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ಮೋಹನ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ಸೆಸ್ಕ್ ಎಇಇ ಅರ್ಕೇಶ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಬಿಸಿಎಂ ಅಧಿಕಾರಿ ಮಹೇಶ್, ನಾಯಕ ಸಮಾಜದ ತಾಲೂಕು ಅಧ್ಯಕ್ಷ ನರಸಿಂಹನಾಯಕ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಾ.ರಾ.ತಿಲಕ್, ಮುಖಂಡರಾದ ಎಚ್.ಪಿ.ಶಿವಣ್ಣ, ಪರಶುರಾಮ್, ಮಹದೇವ್, ಅಣ್ಣೇಗೌಡ, ಸಂಪತ್, ಕುಮಾರ್ ಇನ್ನಿತರರು ಇದ್ದರು.