

ಮೈಸೂರು: ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ‘ಭಾರತೀಯ ಹಬ್ಬಗಳು’ ಸಾಂಸ್ಕೃತಿಕ ಉತ್ಸವವನ್ನು ನ.4ರಿಂದ 10ರವರೆಗೆ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನ.4ರಂದು ಸಂಜೆ 5.30ಕ್ಕೆ ಇನ್ಫೋಸಿಸ್ ಮೈಸೂರು ಮುಖ್ಯಸ್ಥ ಶಾಜಿ ಮ್ಯಾಥ್ಯೂ ಕಾರ್ಯಕ್ರಮ ಉದ್ಘಾಟಿಸುವರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6ಕ್ಕೆ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ವತಿಯಿಂದ ಚೂಡಾಮಣಿ-ಲಂಕಾದಹನ ಪ್ರಸಂಗದ ಸೂತ್ರದ ಗೊಂಬೆಯಾಟ ಪ್ರದರ್ಶನವಾಗಲಿದೆ. ಎಲ್ಲ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ ಎಂದು ಮೈಸೂರು ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಬಿ.ಗಣಪತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5ರಂದು ಸಂಜೆ 6ಕ್ಕೆ ಬೆಂಗಳೂರಿನ ದೃಷ್ಠಿ ಆರ್ಟ್ಸ್ ಎನೆಸೆಂಬಲ್ ವತಿಯಿಂದ ಶಾಸ್ತ್ರೀಯ ನೃತ್ಯ, 6ರಂದು ಸಂಜೆ 4ಕ್ಕೆ ಶತಾವಧಾನಿ ಡಾ.ಆರ್.ಗಣೇಶ್ ಅವರು ಅಷ್ಟಾವಧಾನ ನಡೆಸಿಕೊಡಲಿದ್ದಾರೆ. 7ರಂದು ಸಂಜೆ 6ಕ್ಕೆ ವಿದ್ವಾನ್ ಬಿ.ಸಿ.ಮಂಜುನಾಥ್ ಅವರಿಂದ ಲಯ ಮಿಲನ ವಾದ್ಯ ಸಂಗೀತ ಕಾರ್ಯಕ್ರಮ. 8ರಂದು ಸಂಜೆ 6ಕ್ಕೆ ಅಗರ್ತಲ ಕಲಾವಿದರಿಂದ ತ್ರಿಪುರಾದ ಹಬ್ಬಗಳು ಗುಡ್ಡಗಾಡು ಜನಾಂಗದ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
9ರಂದು ಸಂಜೆ 6ಕ್ಕೆ ಪ್ರವೀಣ್ ಡಿ.ರಾವ್ ನಿರ್ದೇಶನದಲ್ಲಿ ಕರ್ನಾಟಕ ಜಾನಪದ ಕಲಾವಿದರಿಂದ ಜಾನಪದ ಮೇಳ, 10ರಂದು ಸಂಜೆ 6ಕ್ಕೆ ಮೈಸೂರು ಸಹೋದರರಾದ ವಿದ್ವಾನ್ ಮೈಸೂರು ನಾಗರಾಜು, ವಿದ್ವಾನ್ ಡಾ.ಮೈಸೂರು ಮಂಜುನಾಥ್ ಅವರಿಂದ ಯುಗಳ ಪಿಟೀಲು ವಾದನ ನಡೆಯಲಿದೆ.
ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ನ.8ರಿಂದ 10ರವರೆಗೆ ಪ್ರತಿದಿನ ಬೆಳಗ್ಗೆ 10.30ರಿಂದ ಮಧ್ಯಾಹ್ನ 3ಗಂಟೆವರೆಗೆ ನಗರದ ಕಲಾನಿಕೇತನ ಕಾಲೇಜ್ ಆಫ್ ವಿಷುಯಲ್ ಆರ್ಟ್, ರವಿವರ್ಮ ಆರ್ಟ್ ಇನ್ಸ್ಟಿಟ್ಯೂಟ್‌ನವರಿಂದ ರಂಗಾಯಣದ ಬಯಲು ರಂಗಮಂದಿರದಲ್ಲಿ ಕಲಾ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.