ನ.4ರಿಂದ 10ರವರೆಗೆ ದತ್ತಮಾಲಾ ಅಭಿಯಾನ

ನ.4ರಿಂದ 10ರವರೆಗೆ ದತ್ತಮಾಲಾ ಅಭಿಯಾನ
Published on

ಹಾಸನ: ಶ್ರೀರಾಮ್ ಸೇನೆಯಿಂದ ನ.4ರಿಂದ 10ರವರೆಗೆ ದತ್ತಮಾಲಾ ಅಭಿಯಾನ ನಡೆಸಲಾಗುವುದು ಎಂದು ಶ್ರೀರಾಮ್ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ಅವರು ತಿಳಿಸಿದರು.
ದತ್ತ ಪೀಠ ಹಿಂದೂಗಳ ಪೀಠವಾಗಬೇಕೆಂದು ಕಳೆದ 35ವರ್ಷಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ಈ ಬಾರಿಯೂ ದತ್ತಮಾಲ ಅಭಿಯಾನ ಹಮಿಕೊಳ್ಳಲಾಗಿದೆ. ನ.4ರಂದು ಮಲಾಧಾರಣೆ, 7 ರಂದು ಎಲ್ಲಾ ದತ್ತಾತ್ರೇಯ ದೇವಾಲಯಗಳಲ್ಲಿ ಯಾತ್ರೆ ನಡೆಸಿ ದತ್ತ ದೀಪೋತ್ಸವ, ನ.9 ರಂದು ಪಡಿ ಎತ್ತಿ ಶೋಭಾಯಾತ್ರೆ ನಡೆಸಲಾಗುವುದು. ನ.10ರಂದು ಬೆಳಿಗ್ಗೆ 7 ಗಂಟೆಗೆ ದತ್ತ ಪೀಠಕ್ಕೆ ಭೇಟಿ ನೀಡಿ ದತ್ತ ಪಾದುಕೆ ದರ್ಶನ ಹಾಗು ಹೋಮ ಹವನ ಪೂಜಾ ಕಾರ್ಯಕ್ರಮ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶೋಭಾಯಾತ್ರೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಬೃಹತ್ ಧಾರ್ಮಿಕ ಸಭೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಕರುಣೇಶ್ವರ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗಸ್ವಾಮೀಜಿ, ಗಾಣಗಾಪುರದ ಶ್ರೀ ಕಂಬಳಗಿರಿ ಮಹಾರಾಜ, ಶ್ರೀವಿವೇಕಚಿಂತಾಮಣಿ ಮಹಾರಾಜ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಉಪಸ್ಥಿತಿವಹಿಸುವರು. ವಿಶೇಷ ಆಹ್ವಾನಿತರಾಗಿ ಮಾಧವಿ ಲತಾ, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿ.ಟಿ ರವಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಿಶ್ವಧರ್ಮ ರಕ್ಷಾ ಸೇವಾಸಂಸ್ಥೆಯ ಯೋಗಿ ಶಂಜೀತ್ ಸುವರ್ಣ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.
ನಮ ಸಂಘಟನೆಯ ಪ್ರಮುಖ ಬೇಡಿಕೆಯಾಗಿರುವ ದತ್ತಪೀಠದಲ್ಲಿರುವ ಗೋರಿಗಳನ್ನು ತೆರಗೊಳಿಸಿ, ಬಾಬಾಬುಡನ್ ಎಂಬ ಹೆಸರನ್ನು ಬದಲಾವಣೆ ಮಾಡಬೇಕು. ಹಿಂದೂಗಳ ಹಕ್ಕಾಗಿರುವ ದತ್ತಪೀಠ ಹಿಂದೂಗಳಿಗೆ ಸೇರಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಾನಕರೆ ಹೇಮಂತ್, ಅರುಣ್, ಪ್ರಕಾಶ್, ಧರ್ಮನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net