ಚಾಮರಾಜನಗರ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳ ಸಹಯೋಗದಲ್ಲಿ ನ.3 ರಿಂದ 6ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ.
ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿ, ಸಿರಿಧಾನ್ಯಗಳು ಹಾಗೂ ಮಹತ್ವ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲಿನೋತ್ತರ ತಾಂತ್ರಿಕತೆ ಮತ್ತು ವಿವಿಧ ಪ್ರಾತ್ಯಕ್ಷಿಕೆ ತಾಕುಗಳು ಮತ್ತು ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ.
ನ.4ರಂದು ಜಿಲ್ಲೆಯ ರೈತರು ಕೃಷಿ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು, ರೈತ ಮಹಿಳೆಯರು ಭಾಗವಹಿಸಿ ಕೃಷಿ ಮೇಳದ ಪ್ರಯೋಜನ ಪಡೆಯುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯ ವಿಸ್ತರಣಾ ನಿರ್ದೇಶನಾಲಯದ ದೂ.ಸಂ 080-23418883 ಅಥವಾ ಚಾಮರಾಜನಗರದ ಹರದನಹಳ್ಳಿ ಫಾರ್ಮ್ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸುವಂತೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.