ನ.26 ರಂದು ಸಂವಿಧಾನ ರಕ್ಷಣೆ ನಮ್ಮಲ್ಲರ ಹೊಣೆ ಕಾರ್ಯಕ್ರಮ

Dr.V.N.Mahadevaiah
Published on

ಚಾಮರಾಜನಗರ: ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಮತ್ತು ಮಾಜಿ ಶಾಸಕ ಎಸ್.ಜಯಣ್ಣ ಅಭಿಮಾನಿಗಳ ಬಳಗದ ವತಿಯಿಂದ ನ.26 ರಂದು ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಳಗದ ಮುಖಂಡ ಡಾ.ವಿ.ಎನ್.ಮಹದೇವಯ್ಯ ತಿಳಿಸಿದರು.

ಯಳಂದೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಪುಷ್ಷಾರ್ಚನೆ ಮಾಡುವರು. ಸಂಸದ ಸುನೀಲ್ ಬೋಸ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಖ್ಯಾತ ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ಸಂವಿಧಾನ ಬದಲಾವಣೆ; ಬಹುಜನರ ಮೇಲಿನ ದಾಳಿ ವಿಷಯ ಕುರಿತು ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಭಾರತದ ಜೀವಸೆಲೆಯಾದ ಬಹುಸಂಸ್ಕೃತಿ ಮತ್ತು ಸಂವಿಧಾನ ಕುರಿತು ಹಾಗೂ ಚಿಂತಕ ಡಾ.ಮಂಜುನಾಥ ಎಂ.ಅದ್ದೆ ಅವರು ಮೋದಿಯ ಮಹಾಮೌನದ ಹಿಂದಿನ ಲೆಕ್ಕಾಚಾರಗಳು ಎಂಬ ವಿಷಯಗಳ ಕುರಿತು ವಿಷಯ ಮಂಡಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ದರ್ಶನ್ ದ್ರುವನಾರಾಯಣ್, ಎಂ.ಅರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾಗರಾಜು, ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನಾ, ಯಳಂದೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಭಾಗ್ಯ ಉಮ್ಮತ್ತೂರು, ಯರಿಯೂರು ಎಚ್.ಶ್ರೀನಿವಾಸ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net