ನ.22ರಂದು ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕುಕ್ಕಾಗಿ ಪ್ರತಿಭಟನೆ

Published on

ಹಾಸನ: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹಿಂದೂಗಳ ಭೂಮಿಯನ್ನ ವಕ್ಫ್ ಹೆಸರಿನಲ್ಲಿ ಕಬಳಿಸಲು ಹುನ್ನಾರ ನಡೆಸಿರುವ ಕ್ರಮವನ್ನು ಖಂಡಿಸಿ ನ.22ರಂದು ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ದಿನವಿಡಿ ಧರಣಿ ನಡೆಸಿ ಸ್ಥಳದಲ್ಲೇ ರೈತರಿಗೆ ವಕ್ಫ್ ಆಸ್ತಿ ವಿವಾದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಉಚಿತವಾಗಿ ಕಾನೂನು ಸಲಹೆ ನೀಡಲಾಗುವುದು. ರಾಜ್ಯದಲ್ಲಿ ವೋಟ್ ಬ್ಯಾಂಕ್‌ಗಾಗಿ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವುದು ಮಾತ್ರವಲ್ಲದೇ ಅಹವಾಲು ಸ್ವೀಕಾರ ಮಾಡಲಾಗುವುದು. ಶೋಷಣೆಗೆ ಒಳಗಾದ ಸಾರ್ವಜನಿಕರು, ರೈತರು, ಮಠಮಂದಿರಗಳು, ಶಾಲೆಗಳು ಹಾಗು ಸಾರ್ವಜನಿಕ ಆಸ್ತಿಗಳ ಕುರಿತು ಬೆಳಿಗ್ಗೆಯಿಂದ ಸಂಜೆ ಅಹವಾಲು ಸ್ವೀಕರಿಸುತ್ತೇವೆ. ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡಲಾಗುವುದು ಎಂದರು.

ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ಹತ್ತಾರು ದಿನಗಳಿಂದ ಪಕ್ಷದೊಳಗೆ ಆಂತರಿಕ ಚರ್ಚೆ ನಡೆಸಿ ವ್ಯವಸ್ಥಿತವಾಗಿ ಜನರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ಜಿಲ್ಲೆಯಲ್ಲೂ 5 ಜನರ ತಂಡ ರಚಿಸಲಾಗಿದೆ. ಈ ತಂಡದಲ್ಲಿ ವಕೀಲರು, ರೈತ ಮುಖಂಡರು ಇರುತ್ತಾರೆ. ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ ಈ ತಂಡ ರಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಮಠಾಧೀಶರೂ ಸೇರಿ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರನ್ನೂ ಭೇಟಿ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿಯೊಬ್ಬ ರೈತರು ಹಾಗು ಸಾರ್ವಜನಿಕರು ತಪ್ಪದೇ ತಮ್ಮ ಜಾಗದ ಪಹಣಿಯನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಕೋರಿದರು.

ವಕ್ಫ್ ವಿವಾದದ ಕುರಿತು ವಸ್ತುನಿಷ್ಠ ವರದಿ ತಯಾರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. ರೈತರು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದೆ. ಅವರ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ, ನೈಜ ವರದಿಯನ್ನು ಸದನದಲ್ಲಿ ಚರ್ಚಿಸಲಾಗುವುದು. ಈ ತಂಡದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗು ಪ್ರಮುಖ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನವಿಲೇ ಅಣ್ಣಪ್ಪ, ನಾರಾಯಣಗೌಡ,ಚಂದ್ರು,ಅಮಿತ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net