ನ.1ರಂದು ಕರಾಳ ಕನ್ನಡ ರಾಜ್ಯೋತ್ಸವ ಆಚರಣೆ

30M.D.R.1
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಸಿ.ಶಿವಪ್ಪ ಮಾತನಾಡಿದು. ಎನ್.ಡಿ.ಸಂದೀಪ್, ಕೃಷ್ಣಪ್ಪ ಇದ್ದರು.
Published on

ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.1ರಂದು ಕರಾಳ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದಾಗಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಸಿ.ಶಿವಪ್ಪ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆ ನಡೆಸಿ ಮಾತನಾಡಿ, ನವೆಂಬರ್ ತಿಂಗಳು ಬಂದಾಗ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇನ್ನಿತರ ಎಲ್ಲ ಕನ್ನಡಪರ ಸಂಘಟನೆಗಳಿಗೆ ಕನ್ನಡ ಭಾಷೆಯ ಮೇಲೆ ಅಪಾರವಾದ ಅಭಿಮಾನ ಮತ್ತು ಸ್ವಾಭಿಮಾನ ತುಂಬಿ ಬರುತ್ತದೆ. ಆದರೆ ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನೇ ಉಳಿಸುತ್ತಿಲ್ಲ, ಹೀಗಿರುವಾಗ ಯಾವ ಅಭಿಮಾನದ ಕನ್ನಡ ರಾಜ್ಯೋತ್ಸವ? ಎಂದು ಪ್ರಶ್ನೆ ಮಾಡಿದರು.

ಅನುದಾನ ರಹಿತ ಕನ್ನಡ ಮಾದ್ಯಮ ಶಾಲಾ ಕಾಲೇಜುಗಳಿಗೆ ಅನುದಾನವನ್ನು ಕೊಡದೆ 29(1995 ರಿಂದ) ವರ್ಷಗಳಿಂದ 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ-ಕಾಲೇಜು ಒಕ್ಕೂಟವು ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಆ ಶಾಲೆಗಳ ಸಮಸ್ಯೆಯನ್ನು ಬಗೆಹರಿಸದೆ ಕನ್ನಡ ಶಾಲೆಗಳು ಪ್ರತಿವರ್ಷ ಮುಚ್ಚುತ್ತಿವೆ. ಆ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ಬೀದಿಪಾಲಾಗುತ್ತಿದ್ದಾರೆ. ಆ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳಾದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಮೊಟ್ಟೆ, ಇತರ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಇಂತಹ ಸನ್ನಿವೇಶ ಕರ್ನಾಟಕದಲ್ಲಿರುವಾಗ ನಾವೇಕೆ ಕನ್ನಡ ರಾಜ್ಯೋತ್ಸವ ಆಚರಿಸಬೇಕು? ಎಂದು ಬೇಸರ ವ್ಯಕ್ತಪಡಿಸಿದರು.

ಮಂತ್ರಿಗಳಿಗಾಗಲಿ, ಇಲಾಖೆಯ ಅಧಿಕಾರಿಗಳಾಗಲಿ ಈ ಕನ್ನಡ ಶಾಲೆಗಳ ಮೇಲೆ ಸ್ವಲ್ಪವೂ ಕಾಳಜಿ ಹೊಂದಿಲ್ಲ. ನಮ್ಮ ಸಂಘಟನೆಯು ನಿರಂತರವಾಗಿ 20 ವರ್ಷದಿಂದ ಹೋರಾಟ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ,.ಆದ್ದರಿಂದ ನ.1ರಂದು ಕರ್ನಾಟಕ ರಾಜ್ಯಾದ್ಯಂತ ಕಪ್ಪು ಬಾವುಟ ಹಾರಿಸುವ ಮೂಲಕ ಕರಾಳ ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ಆಡಳಿತ ಮಂಡಳಿಯ ಎನ್.ಡಿ. ಸಂದೀಪ್, ಬೈರೇಗೌಡ, ಶಿಕ್ಷಕರಾದ ಕೃಷ್ಣಪ್ಪ, ಸುರೇಶ್, ವೀಣಾ, ಭಾರತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net